ಭಾರತೀಯರ ಅಮೆರಿಕ ಪ್ರೀತಿ: ವಿದೇಶಿ ಪ್ರವಾಸಿಗರಲ್ಲಿ ಭಾರತಕ್ಕೆ ಎರಡನೇ ಸ್ಥಾನ
ಹೊಸದಿಲ್ಲಿ: ವೀಸಾ ಸಂದರ್ಶನಕ್ಕೆ ಸುಧೀರ್ಘ ಕಾಲ ಕಾಯಬೇಕಾದ ಪರಿಸ್ಥಿತಿ ಮತ್ತು ಹೆಚ್ಚಿನ ವಿಮಾನಯಾನ ದರದ ಹೊರತಾಗಿಯೂ, ಅಮೆರಿಕಕ್ಕೆ ಕಳೆದ ಬೇಸಿಗೆಯಲ್ಲಿ ಭೇಟಿ ನೀಡಿದ ಸಾಗರೋತ್ತರ ಸಂದರ್ಶಕರ ಪೈಕಿ ಭಾರತೀಯರು ಎರಡನೇ ಸ್ಥಾನದಲ್ಲಿದ್ದಾರೆ.
ಅಮೆರಿಕ ವಾಣಿಜ್ಯ ಇಲಾಖೆಯ ನ್ಯಾಷನಲ್ ಟ್ರಾವಲ್ ಅಂಡ್ ಟೂರಿಸಂ ಆಫೀಸ್ ನಡೆಸಿದ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಕುರಿತ ಸಮೀಕ್ಷೆಯ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.
ಕೆನಡಾದಿಂದ ಗರಿಷ್ಠ ಅಂದರೆ 26 ಲಕ್ಷ ಮಂದಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಸಾಗರೋತ್ತರ ಪ್ರವಾಸಿಗಳ ಪೈಕಿ ಬ್ರಿಟನ್ (9.7 ಲಕ್ಷ) ಅಗ್ರಸ್ಥಾನದಲ್ಲಿದೆ. ಭಾರತ 5 ಲಕ್ಷ ಪ್ರವಾಸಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಜರ್ಮನಿ (4.7 ಲಕ್ಷ), ಫ್ರಾನ್ಸ್ (4 ಲಕ್ಷ) ಮತ್ತು ಬ್ರೆಜಿಲ್ (3.7ಲಕ್ಷ) ನಂತರದ ಸ್ಥಾನಗಳಲ್ಲಿವೆ ಎಂದು NTTO ಹೇಳಿದೆ.
ಕೆನಡಾದಂತೆ ಅಮೆರಿಕದ ಜತೆ ಗಡಿ ಹಂಚಿಕೊಂಡಿರುವ ಮೆಕ್ಸಿಕೊದಿಂದ 7,2 ಲಕ್ಷ ಮಂದಿ ಪ್ರವಾಸಿಗರು ಈ ಬೇಸಿಗೆಯಲ್ಲಿ ಅಮೆರಿಕಕ್ಕೆ ಆಗಮಿಸಿದ್ದಾರೆ. ಅಂದರೆ ಈ ಬೇಸಿಗೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ ಒಟ್ಟಾರೆ ಪ್ರವಾಸಿಗರಲ್ಲಿ ಭಾರತೀಯರು ಮೂರನೇ ಸ್ಥಾನದಲ್ಲಿದ್ದಾರೆ.
ವಿಮಾನ ಮತ್ತು ರಸ್ತೆ ಸಾರಿಗೆ ಮೂಲಕ ಆಗಮಿಸಿದವರಲ್ಲಿ ಒಟ್ಟಾರೆ ವಿದೇಶಿ ಪ್ರವಾಸಿಗರಲ್ಲಿ ಕೆನಡಾ ಮತ್ತು ಮೆಕ್ಸಿಕೊ ವಿದೇಶಿ ಪ್ರವಾಸಿಗರಲ್ಲಿ ಅಗ್ರ ಎರಡು ಮಾರುಕಟ್ಟೆಗಳಾಗಿವೆ. ವೀಸಾ ವಿಳಂಬದ ಸಮಸ್ಯೆ ಇಲ್ಲದಿದ್ದರೆ ಭಾರತದಿಂದ ಅಮೆರಿಕಕ್ಕೆ ಭೇಟಿ ನೀಡುವವರ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು ಎನ್ನುವುದು ಉದ್ಯಮದ ಅನಿಸಿಕೆ.