ನಿಜ್ಜರ್ ಹತ್ಯೆ ಬಗ್ಗೆ ಪ್ರಧಾನಿ ಮೋದಿಯವರಿಗೆ ಗೊತ್ತಿತ್ತು ಎಂಬ ಕೆನಡಾ ಮಾಧ್ಯಮ ಆರೋಪಕ್ಕೆ ಭಾರತದ ತಿರಸ್ಕಾರ

Update: 2024-11-21 16:23 GMT
PC : PTI

ಹೊಸದಿಲ್ಲಿ : ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವ ನಡುವೆಯೇ, ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸಂಚಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅರಿವಿತ್ತು ಎಂಬ ಕೆನಡಾದ ಮಾಧ್ಯಮ ‘ದಿ ಗ್ಲೋಬ್ ಆ್ಯಂಡ್ ಮೇಲ್’ನ ವರದಿಯನ್ನು ಭಾರತವು ತಿರಸ್ಕರಿಸಿದೆ.

ಮಾಧ್ಯಮ ವರದಿಯು ಸುಳ್ಳು ಪ್ರಚಾರದ ಭಾಗವಾಗಿದೆ ಎಂದು ಹೇಳಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು, ‘ನಾವು ಸಾಮಾನ್ಯವಾಗಿ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಕೆನಡಾ ಸರಕಾರದ ಮೂಲವೊಂದು ಮಾಧ್ಯಮಕ್ಕೆ ನೀಡಿದೆ ಎನ್ನಲಾಗಿರುವ ಇಂತಹ ಹಾಸ್ಯಾಸ್ಪದ ಹೇಳಿಕೆಯನ್ನು ಅದಕ್ಕೆ ಅರ್ಹವಾದ ಖಂಡನೆಯೊಂದಿಗೆ ತಿರಸ್ಕರಿಸಬೇಕಿದೆ. ಇಂತಹ ಸುಳ್ಳು ಪ್ರಚಾರ ಈಗಾಗಲೇ ಹದಗೆಟ್ಟಿರುವ ಸಂಬಂಧಕ್ಕೆ ಇನ್ನಷ್ಟು ಹಾನಿಯನ್ನುಂಟು ಮಾಡುತ್ತದೆಯಷ್ಟೇ ’ ಎಂದು ಹೇಳಿದರು.

ಕೆನಡಾದ ಅನಾಮಧೇಯ ರಾಷ್ಟ್ರೀಯ ಭದ್ರತಾ ಅಧಿಕಾರಿಯೋರ್ವರನ್ನು ಉಲ್ಲೇಖಿಸಿದ್ದ ದಿ ಗ್ಲೋಬ್ ಆ್ಯಂಡ್ ಮೇಲ್, ನಿಜ್ಜರ್ ಹತ್ಯೆ ಸಂಚಿನ ಕುರಿತು ಮೋದಿಯವರಿಗೆ ತಿಳಿದಿತ್ತು. ಗೃಹಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೂ ಇದರ ಅರಿವಿತ್ತು ಎಂದು ತನ್ನ ವರದಿಯಲ್ಲಿ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News