ವಿದ್ಯುತ್ ಖರೀದಿ ಒಪ್ಪಂದಗಳಿಗಾಗಿ ಭಾರತದ ಸರಕಾರಿ ಅಧಿಕಾರಿಗಳಿಗೆ ಲಂಚ ; ಅದಾನಿ ವಿರುದ್ಧ ಅಮೆರಿಕ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ

Update: 2024-11-21 15:19 GMT

ಗೌತಮ್ ಅದಾನಿ | PC :  (@AdaniOnline) / X

ಹೊಸದಿಲ್ಲಿ : ಸೌರ ವಿದ್ಯುತ್ ಖರೀದಿ ಒಪ್ಪಂದಗಳನ್ನು ಏರ್ಪಡಿಸಲು ಭಾರತದಲ್ಲಿ ಸರಕಾರಿ ಅಧಿಕಾರಿಗಳಿಗೆ 265 ಮಿಲಿಯ ಡಾಲರ್ (ಸುಮಾರು 2,240 ಕೋಟಿ ರೂಪಾಯಿ) ಲಂಚ ನೀಡಿರುವ ಆರೋಪದಲ್ಲಿ, ಅಮೆರಿಕದ ಕಾನೂನು ಇಲಾಖೆಯು ಬುಧವಾರ ಅದಾನಿ ಗುಂಪಿನ ಸ್ಥಾಪಕ ಗೌತಮ್ ಅದಾನಿ, ಅವರ ಸಹೋದರನ ಮಗ ಸಾಗರ್ ಅದಾನಿ ಮತ್ತು ಅದಾನಿ ಗ್ರೀನ್ ಕಂಪೆನಿಯ ಇತರ ಹಿರಿಯ ಅಧಿಕಾರಿಗಳ ವಿರುದ್ಧ ನ್ಯೂಯಾರ್ಕ್‌ನ ಜಿಲ್ಲಾ ನ್ಯಾಯಾಲಯವೊಂದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಅದಾನಿ ಗ್ರೀನ್ ಕಂಪೆನಿಯು ವಿದ್ಯುತ್ ಖರೀದಿ ಒಪ್ಪಂದಗಳಿಗಾಗಿ ಭಾರತದಲ್ಲಿ ಅಧಿಕಾರಿಗಳಿಗೆ ಲಂಚ ನೀಡಿದ್ದರೂ, ಅವೇ ಯೋಜನೆಗಳಿಗೆ ಅಮೆರಿಕದಲ್ಲಿ ನಿಧಿ ಸಂಗ್ರಹಿಸುವ ಉದ್ದೇಶದಿಂದ, ಕಂಪೆನಿಯು ಅಮೆರಿಕದ ಲಂಚ ನಿಗ್ರಹ ಕಾನೂನುಗಳನ್ನು ಪಾಲಿಸಿದೆ ಎಂಬ ಸುಳ್ಳು ಭರವಸೆಯನ್ನು ಆರೋಪಿಗಳು ನೀಡಿದ್ದಾರೆ ಹಾಗೂ ಆ ಮೂಲಕ ಅಮೆರಿಕದ ಹೂಡಿಕೆದಾರರನ್ನು ವಂಚಿಸಿದ್ದಾರೆ ಎಂಬ ಆರೋಪವನ್ನೂ ಅವರ ವಿರುದ್ಧ ಹೊರಿಸಲಾಗಿದೆ.

ಇಂಥ ಸುಳ್ಳು ಭರವಸೆಯನ್ನು ಅಮೆರಿಕದ ಫೆಡರಲ್ ಕಾನೂನಿನಡಿ ವಂಚನೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಅದು ಸಾಬೀತಾದರೆ ಆರೋಪಿಗಳು ನ್ಯಾಯಾಲಯದ ಕ್ರಿಮಿನಲ್ ದಂಡನಗೆ ಒಳಪಡಬಹುದು. ಅಂದರೆ ಅವರ ವಿರುದ್ಧ ಆರ್ಥಿಕ ದಂಡ ವಿಧಿಸಬಹುದಾಗಿದೆ ಮತ್ತು ಅಮೆರಿಕದ ಶೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿಸಲ್ಪಟ್ಟಿರುವ ಕಂಪೆನಿಗಳಲ್ಲಿ ಅವರು ನಿರ್ದೇಶಕರಾಗಿ ಅಥವಾ ಅಧಿಕಾರಿಗಳಾಗಿ ಸೇವೆ ಸಲ್ಲಿಸುವುದನ್ನು ನಿಷೇಧಿಸಬಹುದಾಗಿದೆ.

ರಾಜ್ಯಗಳ ವಿದ್ಯುತ್ ವಿತರಣಾ ಕಂಪೆನಿಗಳು (ಡಿಸ್ಕಾಮ್‌ಗಳು) ಅದಾನಿ ಗ್ರೀನ್ ಕಂಪೆನಿಯು ಉತ್ಪಾದಿಸುವ ಸೌರ ವಿದ್ಯುತ್ತನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಸುವಂತೆ ಮಾಡಲು ಒಡಿಶಾ ಮತ್ತು ಆಂಧ್ರಪ್ರದೇಶಗಳ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇದೇ ಕಾರಣಕ್ಕಾಗಿ ಅದಾನಿ ಗ್ರೀನ್ ಕಂಪೆನಿಯ ಅಧಿಕಾರಿಗಳು ತಮಿಳುನಾಡು, ಛತ್ತೀಸ್‌ಗಢ ಹಾಗೂ ಜಮ್ಮು ಮತ್ತು ಕಾಶ್ಮೀರದ ಸರಕಾರಿ ಅಧಿಕಾರಿಗಳಿಗೂ ಲಂಚ ನೀಡಿರುವ ಸಾಧ್ಯತೆಯಿದೆ ಎಂಬುದಾಗಿಯೂ ಆರೋಪದಲ್ಲಿ ಹೇಳಲಾಗಿದೆ.

ಲಂಚಗಳನ್ನು 2021ರ ಮಧ್ಯ ಭಾಗದಿಂದ ಆ ವರ್ಷದ ಕೊನೆಯವರೆಗಿನ ಅವಧಿಯಲ್ಲಿ ನೀಡಲಾಗಿದೆ ಎನ್ನಲಾಗಿದೆ. ಇಲ್ಲಿ ಹೆಸರಿಸಲಾಗಿರುವ ನಾಲ್ಕು ರಾಜ್ಯಗಳಲ್ಲಿ ಆ ಅವಧಿಯಲ್ಲಿ ಕ್ರಮವಾಗಿ ಬಿಜು ಜನತಾ ದಳ, ವೈಎಸ್‌ಆರ್ ಕಾಂಗ್ರೆಸ್, ಡಿಎಮ್‌ಕೆ ಮತ್ತು ಕಾಂಗ್ರೆಸ್ ಪಕ್ಷಗಳ ಸರಕಾರಗಳಿದ್ದವು. ಅದೇ ವೇಳೆ, ಜಮ್ಮು ಮತ್ತು ಕಾಶ್ಮೀರವನ್ನು ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರದ ಬಿಜೆಪಿ ಸರಕಾರ ಆಳುತ್ತಿತ್ತು.

‘‘2020 ಮತ್ತು 2024ರ ನಡುವಿನ ಅವಧಿಯಲ್ಲಿ, ಅದಾನಿ ಗ್ರೀನ್ ಮತ್ತು ಅದರೊಂದಿಗೆ ಗುರುತಿಸಿಕೊಂಡಿರುವ ಸಂಸ್ಥೆಗಳ ಹಿರಿಯ ಅಧಿಕಾರಿಗಳು, ಕಂಪೆನಿಯ ಲಂಚ-ವಿರೋಧಿ ನೀತಿಗಳ ಬಗ್ಗೆ ಅಮೆರಿಕದ ಹೂಡಿಕೆದಾರರು ಮತ್ತು ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ’’ ಎಂದು ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್ ನ್ಯಾಯಾಲಯಕ್ಕೆ ಸಂಬಂಧಿಸಿದ ಅಮೆರಿಕದ ಅಟಾರ್ನಿ ಕಚೇರಿ ತನ್ನ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ. ‘‘ಭಾರತೀಯ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿರುವುದನ್ನು ಅದಾನಿ ಗ್ರೀನ್‌ನ ಹಿರಿಯ ಅಧಿಕಾರಿಗಳು ಈ ಹೂಡಿಕೆದಾರರಿಂದ ಗೌಪ್ಯವಾಗಿಟ್ಟಿದ್ದರು. ಕಂಪೆನಿಯ ಹಸಿರು ಇಂಧನ ಯೋಜನೆಗಳಿಗಾಗಿ ನೂರಾರು ಕೋಟಿ ಡಾಲರ್ ನಿಧಿ ಸಂಗ್ರಹಿಸುವ ಉದ್ದೇಶದಿಂದ ಅವರು ಸುಳ್ಳು ಹೇಳಿದ್ದಾರೆ’’ ಎಂದು ದೋಷಾರೋಪ ಪಟ್ಟಿ ಹೇಳಿದೆ.

ಇದರ ಜೊತೆಗೆ, ಇದೇ ಆರೋಪಗಳಿಗೆ ಸಂಬಂಧಿಸಿ, ‘‘ಬೃಹತ್ ಭ್ರಷ್ಟಾಚಾರ ಯೋಜನೆ’’ಯೊಂದನ್ನು ನಡೆಸಿರುವುದಕ್ಕಾಗಿ ಅದಾನಿ, ಅವರ ಸಹೋದರನ ಮಗ ಹಾಗೂ ಅದಾನಿ ಗ್ರೀನ್‌ನ ಕಾರ್ಯಕಾರಿ ನಿರ್ದೇಶಕ ಸಾಗರ್ ವಿರುದ್ಧ ಅಮೆರಿಕ ಶೇರು ವಿನಿಮಯ ಆಯೋಗ (ಎಸ್‌ಇಸಿ)ವು ಪ್ರತ್ಯೇಕ ದೂರೊಂದನ್ನು ಸಲ್ಲಿಸಿದೆ. ‘‘ಸುಳ್ಳು ಮತ್ತು ತಪ್ಪುದಾರಿಗೆಳೆಯುವ’’ ಹೇಳಿಕೆಗಳ ಆಧಾರದಲ್ಲಿ ಅಮೆರಿಕದ ಹೂಡಿಕೆದಾರರಿಂದ 175 ಮಿಲಿಯ ಡಾಲರ್ (ಸುಮಾರು 1,450 ಕೋಟಿ ರೂಪಾಯಿ) ಸಂಗ್ರಹಿಸಲಾಗಿದೆ ಎಂದು ಅದು ತನ್ನ ದೂರಿನಲ್ಲಿ ಆರೋಪಿಸಿದೆ.

ಅದೇ ವೇಳೆ, ಅಝೂರ್ ಪವರ್ ಗ್ಲೋಬಲ್ ಲಿಮಿಟೆಡ್‌ನ ಸಿರಿಲ್ ಕಬಾನೀಸ್ ವಿರುದ್ಧವೂ ಅಮೆರಿಕದ ಕಾನೂನು ಇಲಾಖೆ ಮತ್ತು ಶೇರು ವಿನಿಮಯ ಆಯೋಗ ಎರಡೂ ದೋಷಾರೋಪ ಹೊರಿಸಿವೆ. ಈ ಕಂಪೆನಿಯು ಲಂಚದ ಏರ್ಪಾಡುಗಳನ್ನು ಮಾಡಿದೆ ಮತ್ತು ಅಮೆರಿಕದ ವಿದೇಶಿ ಭ್ರಷ್ಟಾಚಾರ ಹವ್ಯಾಸಗಳ ಕಾಯ್ದೆಯನ್ನು ಉಲ್ಲಂಘಿಸಿದೆ ಎಂಬುದಾಗಿ ಆರೋಪಿಸಲಾಗಿದೆ.

ಈ ಕಂಪೆನಿಯನ್ನು ಮಾರಿಶಸ್‌ನ ಕಾನೂನುಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ ಮತ್ತು ಎರಡು ಕೆನಡಿಯನ್ ಪೆನ್ಶನ್ ಫಂಡ್‌ಗಳು ಅದರ ಮಾಲೀಕರಾಗಿವೆ ಹಾಗೂ ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡುತ್ತದೆ ಎಂಬುದಾಗಿ ಶೇರು ವಿನಿಮಯ ಆಯೋಗ ಹೇಳಿದೆ.

ಕೇಂದ್ರ ಸರಕಾರದ ಅದೇ ಸೌರ ಇಂಧನ ಯೋಜನೆಯಡಿಯಲ್ಲಿ ಅಝೂರ್ ಕಂಪೆನಿಗೂ ಗುತ್ತಿಗೆಗಳು ಸಿಕ್ಕಿದ್ದವು.

► ಪ್ರಕರಣದ ಮೂಲ ಎಲ್ಲಿ?

ಅಮೆರಿಕದ ಆರೋಪಗಳು ನಿರ್ದಿಷ್ಟ ಘಟನಾವಳಿಗಳನ್ನು ಆಧರಿಸಿವೆ. ಕೇಂದ್ರ ಸರಕಾರಕ್ಕೆ ಒಳಪಟ್ಟ ಭಾರತೀಯ ಸೌರ ಇಂಧನ ಕಂಪೆನಿ (SಇಅI)ಯು ಸೌರ ವಿದ್ಯುತ್ ಉತ್ಪಾದನೆಯಲ್ಲಿ ತೊಡಗುವ ಕಂಪೆನಿಗಳಿಗೆ ಪ್ರೋತ್ಸಾಹಕಗಳನ್ನು ನೀಡುವುದಾಗಿ ಘೋಷಿಸಿತು. ಆ ಕಂಪೆನಿಗಳು ಉತ್ಪಾದಿಸುವ ವಿದ್ಯುತ್ತನ್ನು ಖರೀದಿಸುವ ಖಾತರಿ ನೀಡುವ ಒಪ್ಪಂದವನ್ನು ಅವುಗಳೊಂದಿಗೆ ಮಾಡಿಕೊಳ್ಳುವುದಾಗಿ ಎಸ್‌ಇಸಿಐ ಹೇಳಿತು. ಇದರ ಪ್ರಯೋಜನವನ್ನು ಅದಾನಿ ಗ್ರೀನ್ ಪಡೆದುಕೊಂಡಿತು.

ಆದರೆ, ಅಲ್ಲಿ ಒಂದು ಸಮಸ್ಯೆಯಿತ್ತು. ಭಾರತೀಯ ಸೌರ ಇಂಧನ ಕಂಪೆನಿಯೇನೋ ಅದಾನಿ ಗ್ರೀನ್ ಕೇಳಿದ ಬೆಲೆಗೆ ವಿದ್ಯುತ್ ಖರೀದಿಸಲು ಒಪ್ಪಿಕೊಂಡಿತು. ಆದರೆ, ಇಂಥದೇ ವಿದ್ಯುತ್ ಖರೀದಿ ಒಪ್ಪಂದಗಳನ್ನು ರಾಜ್ಯಗಳ ವಿದ್ಯುತ್ ಪ್ರಸರಣ ಮಂಡಳಿ (ಡಿಸ್ಕಾಮ್)ಗಳೊಂದಿಗೂ ಮಾಡಿಕೊಳ್ಳಬೇಕಾಗಿತ್ತು. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ವಿದ್ಯುತ್ ಖರೀದಿಸಲು ಡಿಸ್ಕಾಮ್‌ಗಳು ತಯಾರಿರಲಿಲ್ಲ.

ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಅದಾನಿ ಗ್ರೀನ್‌ನಿಂದ ವಿದ್ಯುತ್ ಖರೀದಿಸುವಂತೆ ಡಿಸ್ಕಾಮ್‌ಗಳನ್ನು ಒಪ್ಪಿಸಲು ಅವುಗಳ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಹಾಗೂ ಬಳಿಕ, ಲಂಚ ನೀಡಿಲ್ಲ ಎಂಬುದಾಗಿ ಅಮೆರಿಕದ ಹೂಡಿಕೆದಾರರಿಗೆ ಸುಳ್ಳು ಹೇಳಲಾಗಿದೆ ಎನ್ನುವುದು ಈ ಪ್ರಕರಣದ ಮೂಲ ಸಾರವಾಗಿದೆ.

►ಹೇಗೆ ಬೆಳಕಿಗೆ ಬಂತು?

ಅದಾನಿ ಕಂಪೆನಿಯಿಂದ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಡಿಸ್ಕಾಮ್‌ಗಳು ವಿದ್ಯುತ್ ಖರೀದಿಸುವಂತೆ ಮಾಡಲು ರಾಜ್ಯ ಸರಕಾರಗಳ ಅಧಿಕಾರಿಗಳಿಗೆ ಲಂಚ ನೀಡಿರುವ ವಿಷಯ ಹೇಗೆ ಬಯಲಾಯಿತು?

2022ರ ಎಪ್ರಿಲ್‌ನಲ್ಲಿ, ಅಝೂರ್ ಕಂಪೆನಿಯ ಅಧಿಕಾರಿಗಳೊಂದಿಗಿನ ಸಭೆಗೆ ತಯಾರಿಯಾಗಿ ಅದಾನಿ ಗ್ರೀನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಿನೀತ್ ಜೈನ್ ಚಿತ್ರವೊಂದನ್ನು ತೆಗೆದರು. ಅಧಿಕಾರಿಗಳಿಗೆ ಕೊಡಲಾಗಿರುವ ಲಂಚದ ಪೈಕಿ, ಅಝೂರ್ ಕಂಪೆನಿಯು ಅದಾನಿ ಕಂಪೆನಿಗೆ ಎಷ್ಟು ಕೊಡಬೇಕು (ಸುಮಾರು 83 ಮಿಲಿಯ ಡಾಲರ್- ಸುಮಾರು 700 ಕೋಟಿ ರೂಪಾಯಿ) ಎಂಬ ವಿವರಗಳು ಆ ಚಿತ್ರದಲ್ಲಿದ್ದವು.

ಆ ಸಭೆಯಲ್ಲಿ ಗೌತಮ್ ಅದಾನಿಯೂ ಭಾಗವಹಿಸಿದ್ದರು. ಲಂಚದ ಹಣವನ್ನು ಅಝೂರ್ ಕಂಪೆನಿಯು ಅದಾನಿಗೆ ಹೇಗೆ ಕೊಡಬಹುದು ಎಂಬ ಬಗ್ಗೆ ದೀರ್ಘ ಚರ್ಚೆಗಳಾದವು. ಈ ಮಾತುಕತೆಗಳ ಬಳಿಕ, ಆಂಧ್ರಪ್ರದೇಶದಲ್ಲಿನ ತನ್ನ ಹಕ್ಕುಗಳನ್ನು ಅದಾನಿಗೆ ಬಿಟ್ಟುಕೊಟ್ಟಿತು ಎನ್ನಲಾಗಿದೆ.

ಯೋಜನೆಯಲ್ಲಿ ಸಕ್ರಿಯರಾಗಿರುವ ಅದಾನಿ ಗ್ರೀನ್ ಮತ್ತು ಅಝುರ್ ಕಂಪೆನಿಯ ಹಲವಾರು ಉದ್ಯೋಗಿಗಳು ‘ಇಲೆಕ್ಟ್ರಾನಿಕ್ ಮೆಸೇಜಿಂಗ್’ ಮೂಲಕ ಪರಸ್ಪರ ಸಂವಹನ ನಡೆಸುತ್ತಿದ್ದರು. ಈ ಪೈಕಿ ಕೆಲವು ಸಂವಹನವು ಆ ಉದ್ಯೋಗಿಗಳು ಅಮೆರಿಕದಲ್ಲಿದ್ದಾಗ ನಡೆದಿದ್ದವು.

ಈ ವಿಷಯವು ಶೇರು ವಿನಿಮಯ ಆಯೋಗದ ಕದ ತಟ್ಟಿದಾಗ, ಅಝೂರ್ ಕಂಪೆನಿಯ ಅಧಿಕಾರಿಗಳು ತಪ್ಪು ಮಾಹಿತಿಯನ್ನು ನೀಡಿದರು ಎಂದು ಆರೋಪಿಸಲಾಗಿದೆ.

2022 ಆಗಸ್ಟ್‌ನಲ್ಲಿ, ಅಝೂರ್ ಕಂಪೆನಿಯ ಐವರು ಉದ್ಯೋಗಿಗಳು ತಮ್ಮ ಪಾತ್ರವನ್ನು ಮರೆಮಾಚುವ ಉದ್ದೇಶದಿಂದ ಅದಾನಿ ಕಂಪೆನಿಯ ಅಧಿಕಾರಿಗಳನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಲು ಪಿತೂರಿ ಹೂಡಿದರು ಎನ್ನಲಾಗಿದೆ.

ಬಳಿಕ, 2023 ಮಾರ್ಚ್‌ನಲ್ಲಿ, ಎಫ್‌ಬಿಐ ತನಿಖಾಧಿಕಾರಿಗಳು ಸಾಗರ್ ಅದಾನಿಯನ್ನು ಸಂಪರ್ಕಿಸಿ ಅವರ ಇಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡರು ಹಾಗೂ ತನಿಖೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ನೀಡಿದರು.

ಈ ಪ್ರಕರಣದ ಪ್ರಮುಖ ಪುರಾವೆಗಳು ಸಾಗರ್ ಅದಾನಿಯ ಮೊಬೈಲ್ ಫೋನ್‌ನಿಂದ ಬಂದಿರಬಹುದು ಎನ್ನಲಾಗಿದೆ. ಅವರು ತನ್ನ ಮೊಬೈಲ್‌ನಲ್ಲಿ ರಾಜ್ಯಗಳ ಹೆಸರುಗಳು, ಅಧಿಕಾರಿಗಳಿಗೆ ನೀಡಲಾಗಿರುವ ನಿಖರವಾದ ಮೊತ್ತ, ಡಿಸ್ಕಾಮ್‌ಗಳು ಖರೀದಿಸುವ ವಿದ್ಯುತ್ ಪ್ರಮಾಣ, ಪ್ರತಿ ಮೆಗಾವಾಟ್‌ಗೆ ನೀಡಲಾದ ಲಂಚದ ಮೊತ್ತ ಮತ್ತು ಲಂಚ ಸ್ವೀಕರಿಸಿದ ಸರಕಾರಿ ಅಧಿಕಾರಿಗಳ ಹುದ್ದೆಗಳು ಮುಂತಾದ ವಿವರಗಳನ್ನು ದಾಖಲಿಸಿದ್ದರು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News