ಅದಾನಿ ವಿರುದ್ಧ ಲಂಚ ಮತ್ತು ವಂಚನೆ ಪ್ರಕರಣದಲ್ಲಿ ಕೇಂದ್ರ ಸರಕಾರದ ಪಾತ್ರವಿದೆಯೇ? : ಟಿಎಂಸಿ ಸಂಸದ ಸಾಕೇತ್ ಗೋಖಲೆ ಪ್ರಶ್ನೆ
ಹೊಸದಿಲ್ಲಿ : ಅಮೆರಿಕದಲ್ಲಿ ಗೌತಮ ಅದಾನಿ ವಿರುದ್ಧ ದಾಖಲಾಗಿರುವ ಲಂಚ ಮತ್ತು ವಂಚನೆ ಪ್ರಕರಣದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಭಾಗಿಯಾಗಿತ್ತೇ ಎಂದು ಟಿಎಂಸಿ ಸಂಸದ ಸಾಕೇತ್ ಗೋಖಲೆ ಗುರುವಾರ ಪ್ರಶ್ನಿಸಿದ್ದಾರೆ.
ಅದಾನಿ ವಿರುದ್ಧ ದೋಷಾರೋಪಣೆ ಸುದ್ದಿಗೆ ಶೇರು ಮಾರುಕಟ್ಟೆಗಳು ಪ್ರತಿಕ್ರಿಯಿಸುತ್ತಿದ್ದರೆ ಸರಕಾರವು ಈ ವಿಷಯದಲ್ಲಿ ಮೌನವಾಗಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ.
ಎಕ್ಸ್ ಪೋಸ್ಟ್‌ನಲ್ಲಿ ಗೋಖಲೆ ಅದಾನಿ ಎನರ್ಜಿಯ ಶೇರು ಬೆಲೆಗಳಲ್ಲಿ ಭಾರೀ ಕುಸಿತವನ್ನು ತೋರಿಸಿರುವ ಮಾರ್ಕೆಟ್ ಅಪ್‌ಡೇಟ್‌ನ್ನು ಹಂಚಿಕೊಂಡಿದ್ದಾರೆ. ‘ಅಮೆರಿಕದ ದೋಷಾರೋಪದ ಬಳಿಕ ಅದಾನಿ ಎನರ್ಜಿ ಶೇರುಗಳಲ್ಲಿ ರಕ್ತಪಾತ’ ಎಂಬ ಅಡಿಬರಹವನ್ನೂ ಅವರು ನೀಡಿದ್ದಾರೆ.
‘ದೋಷಾರೋಪ ಸುದ್ದಿಗೆ ಮಾರುಕಟ್ಟೆಗಳು ಪ್ರತಿಕ್ರಿಯಿಸುತ್ತಿವೆ, ಆದರೆ ಭಾರತ ಸರಕಾರವು ಸಂಪೂರ್ಣವಾಗಿ ಮೌನವಾಗಿದೆ. ಸರಕಾರಿ ಸ್ವಾಮ್ಯದ ಪಿಎಸ್‌ಯುಗೆ ಲಂಚ ನೀಡಿದ್ದ ಆರೋಪವಿದೆ. ಇದರಲ್ಲಿ ಮೋದಿ ಮತ್ತು ಬಿಜೆಪಿ ಪಾಲ್ಗೊಳ್ಳುವಿಕೆ ಎಷ್ಟಿದೆ?’ ಎಂದು ಗೋಖಲೆ ಪ್ರಶ್ನಿಸಿದ್ದಾರೆ.
ಅದಾನಿ ಎನರ್ಜಿ ಮಾರುಕಟ್ಟೆಗಿಂತ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿಗೆ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡುತ್ತಿದೆ ಎಂದು ಆರೋಪಿಸಲಾಗಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ನ್ಯೂಯಾಕ್ ಪೂರ್ವ ಜಿಲ್ಲೆಯ ಯುಎಸ್ ಅಟಾರ್ನಿ ಕಚೇರಿಯ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಅದಾನಿ ಮತ್ತು ಅವರ ಏಳು ಹಿರಿಯ ಅಧಿಕಾರಿಗಳು ನೂರಾರು ಮಿಲಿಯನ್ ಡಾಲರ್ ಲಂಚವನ್ನು ಪಾವತಿಸಿದ್ದಾರೆ ಮತ್ತು ಇದನ್ನು ಅಮೆರಿಕದ ಹೂಡಿಕೆದಾರರಿಂದ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮೊಯಿತ್ರಾ ಅದಾನಿ ಗ್ರೂಪ್‌ನ ಸಾಗರೋತ್ತರ ನಿಧಿಗಳಲ್ಲಿ ಹೂಡಿಕೆ ಆರೋಪವನ್ನು ಹೊಂದಿರುವ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬಿಚ್ ಅವರನ್ನೂ ಟೀಕಿಸಿದ್ದಾರೆ.