ಭಾರತೀಯ ಮಹಾ ಲೇಖಪಾಲರಾಗಿ ಕೆ.ಸಂಜಯ್ ಮೂರ್ತಿ ಅಧಿಕಾರ ಸ್ವೀಕಾರ

Update: 2024-11-21 16:32 GMT

ರಾಷ್ಟ್ರಪತಿ ದ್ರೌಪದಿ ಮುರ್ಮು, ಕೆ.ಸಂಜಯ್ ಮೂರ್ತಿ | PC : PTI 

ಹೊಸದಿಲ್ಲಿ: ಮಾಜಿ ಉನ್ನತ ಶಿಕ್ಷಣ ಕಾರ್ಯದರ್ಶಿ ಕೆ.ಸಂಜಯ್ ಮೂರ್ತಿ ಗುರುವಾರದಂದು ಭಾರತೀಯ ಮಹಾ ಲೇಖಪಾಲರಾಗಿ ಅಧಿಕಾರ ಸ್ವೀಕರಿಸಿದರು.

ಸಂಜಯ್ ಮೂರ್ತಿ ಹಿಮಾಚಲ ಪ್ರದೇಶ ಕೇಡರ್ ನ 1989ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರು ಬುಧವಾರ ಹುದ್ದೆಯಿಂದ ನಿರ್ಗಮಿಸಿದ ಗಿರೀಶ್ ಚಂದ್ರ ಮುರ್ಮು ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಗುರುವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಜಯ್ ಮೂರ್ತಿಗೆ ಪ್ರಮಾಣ ವಚನ ಬೋಧಿಸಿದರು.

ಇದಕ್ಕೂ ಮುನ್ನ, ಸಂಜಯ್ ಮೂರ್ತಿ ಶಿಕ್ಷಣ ಸಚಿವಾಲಯದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಇದಲ್ಲದೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ, ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮದ ಸಿಇಒ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ಸೋಮವಾರ ಸಂಜಯ್ ಮೂರ್ತಿ ಅವರನ್ನು ಭಾರತೀಯ ಮಹಾ ಲೇಖಪಾಲರನ್ನಾಗಿ ಕೇಂದ್ರ ಸರಕಾರ ಪ್ರಕಟಿಸಿತ್ತು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಸರಕಾರದಲ್ಲಿನ ತಮ್ಮ ಅವಧಿಗೂ ಮುನ್ನ, ಹಿಮಾಚಲ ಪ್ರದೇಶ ಸರಕಾರದ ಪ್ರಮುಖ ಹುದ್ದೆಗಳಲ್ಲಿ ಸಂಜಯ್ ಮೂರ್ತಿ ಕಾರ್ಯನಿರ್ವಹಿಸಿದ್ದರು. ಆಡಳಿತ, ಸಾಮಾಜಿಕ, ಆರ್ಥಿಕ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಅವರು ವ್ಯಾಪಕ ಅನುಭವ ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News