ಪಶ್ಚಿಮ ಏಶ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ | ಲೆಬನಾನ್ ತ್ಯಜಿಸುವಂತೆ ಭಾರತೀಯ ಪ್ರಜೆಗಳಿಗೆ ಸಲಹೆ
ಹೊಸದಿಲ್ಲಿ : ಪಶ್ಚಿಮ ಏಶ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಲೆಬನಾನ್ ತ್ಯಜಿಸುವಂತೆ ಭಾರತೀಯ ಪ್ರಜೆಗಳಿಗೆ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಗುರುವಾರ ಸಲಹೆ ನೀಡಿದೆ.
ಬೈರೂತ್ ಮೇಲೆ ಇಸ್ರೇಲ್ ಮಂಗಳವಾರ ನಡೆಸಿದ ದಾಳಿಯಲ್ಲಿ ಲೆಬನಾನ್‌ನ ಹೋರಾಟ ಸಂಘಟನೆ ಹಿಜ್ಬುಲ್ಲಾದ ಉನ್ನತ ಸೇನಾ ಕಮಾಂಡರ್ ಫವಾದ್ ಶುಕ್ರ್ ಹತ್ಯೆಯಾದ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ಈ ಸಲಹೆ ನೀಡಿದೆ.
ಬುಧವಾರ ಹಮಾಸ್ ಟೆಹ್ರಾನ್‌ನಲ್ಲಿ ತನ್ನ ನಾಯಕ ಇಸ್ಮಾಯೀಲ್ ಹಾನಿಯೇಹ್‌ರನ್ನು ಹತ್ಯೆಗೈದಿರುವುದನ್ನು ದೃಢಪಡಿಸಿತ್ತು ಹಾಗೂ ಈ ಹತ್ಯೆಗೆ ಇಸ್ರೇಲ್ ಅನ್ನು ದೂಷಿಸಿತ್ತು. ಆದರೆ, ಈ ದಾಳಿಯಲ್ಲಿ ತಾನು ಭಾಗಿಯಾಗಿರುವುದನ್ನು ಇಸ್ರೇಲ್ ದೃಢಪಡಿಸಿಲ್ಲ. ನಿರಾಕರಿಸಿಯೂ ಇಲ್ಲ.
ಹಾನಿಯೇಹ್ ಹತ್ಯೆಗೆ ಇಸ್ರೇಲ್ ವಿರುದ್ಧ ಪ್ರತೀಕಾರಕ್ಕೆ ಇರಾನ್ ಬುಧವಾರ ಕರೆ ನೀಡಿತ್ತು.
ಇಲ್ಲಿನ ಇತ್ತೀಚೆಗಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಂದಿನ ನೋಟಿಸ್ ನೀಡುವ ವರೆಗೆ ಲೆಬನಾನ್‌ಗೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಲಾಗಿದೆ ಎಂದು ಬೈರೂತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ಲೆಬನಾನ್‌ನಲ್ಲಿ ಉಳಿದಿರುವವರಿಗೆ ತೀವ್ರ ಎಚ್ಚರಿಕೆ ವಹಿಸುವಂತೆ, ತಮ್ಮ ಸಂಚಾರವನ್ನು ನಿರ್ಬಂಧಿಸುವಂತೆ ಹಾಗೂ ಸಂಪರ್ಕದಲ್ಲಿ ಇರುವಂತೆ ಭಾರತೀಯ ರಾಯಭಾರಿ ಕಚೇರಿ ಸೂಚಿಸಿದೆ.
ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಹಲವು ದೇಶಗಳು ಲೆಬೆನಾನ್‌ಗೆ ಪ್ರಯಾಣಿಸದಂತೆ ಹಾಗೂ ಲೆಬೆನಾನ್ ತ್ಯಜಿಸುವಂತೆ ತಮ್ಮ ಪ್ರಜೆಗಳಿಗೆ ಸಲಹೆ ನೀಡಿವೆ.
----------------------------------