ವಿಪಕ್ಷ ಮುಖಂಡರುಗಳಿಗೆ ಹ್ಯಾಕಿಂಗ್ ಎಚ್ಚರಿಕೆ ಸಂದೇಶ| ತೀವ್ರತೆ ತಗ್ಗಿಸಲು ಆ್ಯಪಲ್ ಕಂಪನಿ ಅಧಿಕಾರಿಗಳಿಗೆ ಸೂಚಿಸಿದ ಭಾರತ ಸರ್ಕಾರ: ವರದಿ
ಹೊಸದಿಲ್ಲಿ: ಭಾರತದ ಹಲವು ವಿಪಕ್ಷ ರಾಜಕಾರಣಿಗಳ ಆ್ಯಪಲ್ ಫೋನ್‌ಗಳು ಹ್ಯಾಕ್ ಆಗಿರುವ ಸಾಧ್ಯತೆಯಿದೆಯೆಂದು ಹೇಳಿಕೊಂಡು ಕೆಲ ಮುಖಂಡರಿಗೆ ಆ್ಯಪಲ್ ಕಳಿಸಿದ ಎಚ್ಚರಿಕೆಯ ಸಂದೇಶಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಅಧಿಕಾರಿಗಳು ಆ್ಯಪಲ್ ಇಂಡಿಯಾ ಪ್ರತಿನಿಧಿಗಳನ್ನು ಕರೆಸಿ ಈ ಎಚ್ಚರಿಕೆಗಳ ರಾಜಕೀಯ ಪರಿಣಾಮಗಳನ್ನು ಕಡಿಮೆಗೊಳಿಸಲು ಸಹಾಯ ಮಾಡಬೇಕೆಂದು ಕಂಪೆನಿ ಮುಂದೆ ಬೇಡಿಕೆಯಿರಿಸಿದ್ದರೆಂದು ಮೂಲಗಳನ್ನಾಧರಿಸಿ The Washington Post ವರದಿ ಮಾಡಿದೆ.
ಭಾರತದ ಹೊರಗಿರುವ ಆ್ಯಪಲ್ ಸೆಕ್ಯುರಿಟಿ ತಜ್ಞರನ್ನೂ ಕರೆಸಿದ ಭಾರತ ಸರ್ಕಾರ ರಾಜಧಾನಿ ದಿಲ್ಲಿಯಲ್ಲಿ ಸಭೆ ನಡೆಸಿ ಆ್ಯಪಲ್ ಕಂಪೆನಿಯು ಭಾರತದ ವಿಪಕ್ಷ ಮುಖಂಡರಿಗೆ ನೀಡಿದ ಎಚ್ಚರಿಕೆಗಳಿಗೆ ಪರ್ಯಾಯ ವಿವರಣೆಗಳನ್ನು ಒದಗಿಸುವಂತೆಯೂ ಬೇಡಿಕೆಯಿರಿಸಿದೆ.
ಆದರೆ ಈ ವಿಚಾರ ಕುರಿತಂತೆ ಆ್ಯಪಲ್ ಅಥವಾ ಭಾರತ ಸರ್ಕಾರದ ಐಟಿ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ.
ಅಕ್ಟೋಬರ್ ತಿಂಗಳಿನಲ್ಲಿ ಆ್ಯಪಲ್ ನಿಂದ ಎಚ್ಚರಿಕೆ ಸಂದೇಶಗಳು ಬಂದಿರುವುದನ್ನು ಹಲವು ವಿಪಕ್ಷ ಮುಖಂಡರು ಸ್ಕ್ರೀನ್‌ಶಾಟ್‌ಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಈ ಬೆದರಿಕೆ ಸಂದೇಶಗಳು ಯಾವುದೇ ನಿರ್ದಿಷ್ಟ ಸರ್ಕಾರ ಪ್ರಾಯೋಜಿಕ ದಾಳಿಕೋರನ ಕುರಿತಾಗಿಲ್ಲ ಎಂದು ಆ್ಯಪಲ್ ನಂತರ ಹೇಳಿತ್ತು.