ಶಸ್ತ್ರಾಸ್ತ್ರ ಆಮದು: ಭಾರತ ವಿಶ್ವದಲ್ಲೇ ಅಗ್ರ!
ಹೊಸದಿಲ್ಲಿ: ಕೇಂದ್ರ ಸರ್ಕಾರ ರಕ್ಷಣಾ ಕೈಗಾರಿಕೆಯ ನೆಲೆಯನ್ನು ಗಟ್ಟಿಗೊಳಿಸುವ ಸಂಕಲ್ಪ ಮಾಡಿರುವ ನಡುವೆಯೇ ವಿಶ್ವದಲ್ಲಿ ಅತಿಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶವಾಗಿ ಭಾರತ ಹೊರಹೊಮ್ಮಿದೆ. 2019-2023ರ ಅವಧಿಯಲ್ಲಿ ಜಾಗತಿಕ ಶಸ್ತ್ರಾಸ್ತ್ರ ಆಮದಿನ ಶೇಕಡ 9.8ರಷ್ಟು ಪಾಲು ಭಾರತದ್ದಾಗಿದೆ.
2014-18ರಿಂದ 2019-2023ರ ಅವಧಿಯಲ್ಲಿ ಜಾಗತಿಕ ಶಸ್ತ್ರಾಸ್ತ್ರ ಆಮದು ಶೇಕಡ 4.7ರಷ್ಟು ಹೆಚ್ಚಿದೆ. ಸ್ಟಾಕ್ ಹೋಂ ಇಂಟರ್ ನ್ಯಾನಲ್ ಪೀಸ್ ರಿಸರ್ಚ್ ಇನ್ ಸ್ಟಿಟ್ಯೂಟ್ ಸೋಮವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ನಾಲ್ಕು ವರ್ಷಗಳಿಂದ ಚೀನಾ ಜತೆಗಿನ ಸೇನಾ ಸಂಘರ್ಷದ ಹಿನ್ನೆಲೆಯಲ್ಲಿ ರಷ್ಯಾ, ಫ್ರಾನ್ಸ್, ಅಮೆರಿಕ ಮತ್ತು ಇಸ್ರೇಲ್ ನಿಂದ ತುರ್ತು ಶಸ್ತ್ರಾಸ್ತ್ರ ಖರೀದಿ ಕೂಡಾ ಸೇರಿದೆ.
ಭಾರತಕ್ಕೆ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶವಾಗಿ ರಷ್ಯಾ ಮುಂದುವರಿದಿದೆ. ಭಾರತದ ಒಟ್ಟು ಆಮದಿನ ಪೈಕಿ ಈ ಪಾಲು ಶೇಕಡ 36ರಷ್ಟಾಗಿದೆ. 2014-18ರಿಂದ 2019-23ರ ಅವಧಿಯಲ್ಲಿ ರಷ್ಯಾದಿಂದ ಆಮದು ಶೇಕಡ 34ರಷ್ಟು ಕುಸಿದಿದೆ.
ಭಾರತದ ಒಟ್ಟು ಆಮದಿನ ಪೈಕಿ ಶೇಕಡ 33ರಷ್ಟನ್ನು ಫ್ರಾನ್ಸ್ ನೀಡುತ್ತಿದೆ. ಅಮೆರಿಕ ಶೇಕಡ 13ರಷ್ಟು ರಫ್ತಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಎರಡೂ ದೇಶಗಳ ಜತೆ ಈ ವರ್ಷ ಭಾರತ ದೊಡ್ಡ ಪ್ರಮಾಣ ಶಸ್ತ್ರಾಸ್ತ್ರ ಆಮದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಅಮೆರಿಕದಿಂದ 3.9 ಶತಕೋಟಿ ಡಾಲರ್ ಮೌಲ್ಯದ 31 ಸಶಸ್ತ್ರ ಎಂಕ್ಯೂ-9ಬಿ ಸ್ಕೈ ಗಾರ್ಡಿಯನ್ ಡ್ರೋನ್ ಗಳು, ಫ್ರಾನ್ಸ್ ನಿಂದ ಸುಮಾರು 600 ಕೋಟಿ ಡಾಲರ್ ಮೌಲ್ಯದ 26 ರಫೇಲ್-ಎಂ ಯುದ್ಧವಿಮಾನಗಳ ಖರೀದಿ ಸೇರಿದೆ.