ಭಾರತೀಯ ಪ್ರಜಾಪ್ರಭುತ್ವವು ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ: ಪ್ರಗತಿಪರ ಲೇಖಕರ ಸಂಘ
ಹೊಸದಿಲ್ಲಿ: ಪ್ರಗತಿಪರ ಲೇಖಕರ ಸಂಘ (ಪಿಡಬ್ಲ್ಯುಎ)ವು ಇತ್ತೀಚಿಗೆ ಜಬಲ್ಪುರದಲ್ಲಿ ನಡೆದ ತನ್ನ 18ನೇ ವಾರ್ಷಿಕ ಸಮ್ಮೇಳನದಲ್ಲಿ ಘೋಷಣೆಯೊಂದನ್ನು ಅಂಗೀಕರಿಸಿದ್ದು,ಅದು ಭಾರತದಲ್ಲಿ ಪ್ರಜಾಪ್ರಭುತ್ವ,ಸಮಾನತೆ ಮತ್ತು ಜಾತ್ಯತೀತತೆಗೆ ಬೆದರಿಕೆಗಳನ್ನು ಈ ಘೋಷಣೆಯಲ್ಲಿ ಚರ್ಚಿಸಿದೆ.
‘ಇಂದು ಭಾರತೀಯ ಪ್ರಜಾಪ್ರಭುತ್ವವು ಹಿಂದೆಂದೂ ಕಂಡಿರದ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಶತಮಾನದಲ್ಲಿ,ವಿಶೇಷವಾಗಿ ಕಳೆದೊಂದು ದಶಕದಲ್ಲಿ ವೈಚಾರಿಕತೆ,ಬಹುತ್ವ,ವೈಜ್ಞಾನಿಕ ಚಿಂತನೆ ಮತ್ತು ಪ್ರಗತಿಪರ ದೃಷ್ಟಿಕೋನಗಳನ್ನು ಬಲಿಗೊಟ್ಟು ತಿರೋಗಾಮಿ, ಬಹುಸಂಖ್ಯಾತ, ಮೂಢನಂಬಿಕೆಯ ಮತ್ತು ಪುನರುಜ್ಜೀವನದ ವಿಚಾರಗಳನ್ನು ಸಾಂಸ್ಥೀಕರಿಸುತ್ತಿರುವುದನ್ನು ಮತ್ತು ವೈಭವೀಕರಿಸುತ್ತಿರುವುದನ್ನು ನಾವು ನೋಡಬಹುದು ’ ಎಂದು ಘೋಷಣೆಯಲ್ಲಿ ಹೇಳಲಾಗಿದೆ.
ನಿರುದ್ಯೋಗವು ಉತ್ತುಂಗದಲ್ಲಿದೆ,ಆರ್ಥಿಕ ಅಸಮಾನತೆಯ ಅಂತರ ಇನ್ನಷ್ಟು ಹಿಗ್ಗಿದೆ. ಈಗಿನ ಪೀಳಿಗೆಯ ಭವಿಷ್ಯವೂ ಅಪಾಯದಲ್ಲಿದೆ. ಸಂವಿಧಾನದಲ್ಲಿ ಹೇಳಲಾಗಿರುವ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಕೈಬಿಟ್ಟು ಇಡೀ ದೇಶವನ್ನು ಒಂದು ವಾಣಿಜ್ಯ ಯೋಜನೆಯಾಗಿ ಪರಿವರ್ತಿಸಲಾಗುತ್ತಿದೆ ಎಂದು ಘೋಷಣೆಯಲ್ಲಿ ಹೇಳಿರುವ ಪಿಡಬ್ಲುಎ,‘ಪ್ರಸ್ತುತ ಸವಾಲುಗಳ ಸಂದರ್ಭದಲ್ಲಿ ಸಾಂವಿಧಾನಿಕ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದು ನಮ್ಮ ಮೊದಲ ಹೊಣೆಗಾರಿಕೆಯಾಗಿದೆ. ಇದೇ ವೇಳೆ ವ್ಯಾಪಕ ಸಾಮೂಹಿಕ ಹೋರಾಟಗಳೊಂದಿಗೆ ಹೆಚ್ಚು ಪರಿಣಾಮಕಾರಿ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಲೇಖಕರ ಸಂಘಟನೆಗಳ ಸಂಯುಕ್ತ ರಂಗವೊಂದನ್ನು ರೂಪಿಸುವ ಅಗತ್ಯವೂ ಇದೆ. ಅದು ಓರ್ವ ವ್ಯಕ್ತಿಯಾಗಿರಲಿ ಅಥವಾ ಒಂದು ಗುಂಪಾಗಿರಲಿ,ಶೋಷಿತರು,ತುಳಿಯಲ್ಪಟ್ಟವರು ಮತ್ತು ಹಿಂದುಳಿದವರ ಪರವಾಗಿ ನಿಲ್ಲುವುದು ಸಾಹಿತ್ಯದ ಕರ್ತವ್ಯವಾಗಿದೆ ’ ಎಂದು ಬೆಟ್ಟು ಮಾಡಿದೆ.
ಮಣಿಪುರ ಮತ್ತು ಮೇವಾತ್‌ನಿಂದ ಉತ್ತರಾಖಂಡದವರೆಗೆ ಮತ್ತು ದೇಶದ ಇತರ ಭಾಗಗಳಲ್ಲಿ ವಿಭಜನೆ ಮತ್ತು ಪ್ರತ್ಯೇಕತೆಯ ಹೊಸ ಅಧ್ಯಾಯವನ್ನು ಬರೆಯಲಾಗುತ್ತಿದೆ. ನಗರಗಳ ಹೆಸರುಗಳನ್ನು ಬದಲಿಸುವ ಮೂಲಕ ಸಮ್ಮಿಶ್ರ ಗುರುತನ್ನು ಅಳಿಸಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯಗಳನ್ನು ಲವ್‌ಜಿಹಾದ್,ಗೋಹತ್ಯೆ ಮತ್ತು ಬಲವಂತದ ಮತಾಂತರದ ಅಪರಾಧಿಗಳೆಂದು ಘೋಷಿಸುವ ಮೂಲಕ ಅವರನ್ನು ವೈರಿಗಳನ್ನಾಗಿ ಬಿಂಬಿಸಲಾಗುತ್ತಿದೆ. ಉನ್ಮಾದಿತ ಗುಂಪಿನಿಂದ ಕೊಲೆ ಮತ್ತು ಬುಲ್ಡೋಜರ್ ನ್ಯಾಯ ಅಲ್ಪಸಂಖ್ಯಾತರನ್ನು ಮತ್ತು ಭಿನ್ನಾಭಿಪ್ರಾಯದ ಧ್ವನಿಗಳನ್ನು ದಮನಿಸಲು ಸರಕಾರದ ಹೊಸ ಅಸ್ತ್ರಗಳಾಗಿವೆ ಎಂದೂ ಪಿಡಬ್ಲ್ಯುಎ ಘೋಷಣೆಯಲ್ಲಿ ಕಳವಳ ವ್ಯಕ್ತಪಡಿಸಿದೆ.