ಭಾರತದ ಅತೀ ಉದ್ದದ ಸಮುದ್ರ ಸೇತುವೆ ಉದ್ಘಾಟನೆ

Update: 2024-01-12 13:42 GMT

 ನರೇಂದ್ರ ಮೋದಿ | Photo: X \ @narendramodi

ಮುಂಬೈ : ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮುಂಬೈನ ಸೆವ್ರಿ ಮತ್ತು ರಾಯಗಡ್ ಜಿಲ್ಲೆಯ ನ್ಹವಾ ಶೆವಾ ನಡುವಿನ ʼಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ʼ ಸೇತುವೆಯನ್ನು ಉದ್ಘಾಟಿಸಿದರು.

ದೇಶದ ಅತೀ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ರಸ್ತೆ 21.8 ಕಿಮೀ ಉದ್ದವಿದೆ. 17,840 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಆರು ಲೇನ್‌ಗಳನ್ನು ಹೊಂದಿದ್ದು, ಸಮುದ್ರ ಮೇಲೆಯೇ 16.5 ಕಿಮೀ ಉದ್ದದ ಸೇತುವೆ ಹೊಂದಿದೆ. ಇದನ್ನು ಅಟಲ್ ಸೇತೂ ಎಂದೂ ಕರೆಯಲಾಗುತ್ತದೆ.

ನೂತನ ಸೇತುವೆಯು ಮುಂಬೈ ಮತ್ತು ನವಿ ಮುಂಬೈ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಒಂದೂವರೆ ಗಂಟೆಯ ಪ್ರಯಾಣದ ಅವಧಿಯು 20 ನಿಮಷಗಳಿಗೆ ಇಳಿಯುವುದರಿಂದ, ಮುಂಬೈನ ಆರ್ಥಿಕ ಬೆಳವಣಿಗೆಯಲ್ಲಿ ಈ ಸೇತುವೆಯು ಮಹತ್ತರ ಪಾತ್ರ ವಹಿಸಲಿದೆ ಎಂದು ಅಂದಾಜಿಸಲಾಗಿದೆ.

MTHL ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗದ ಸಂಪರ್ಕವನ್ನು ಒದಗಿಸುತ್ತದೆ. ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮುಂಬೈ ಬಂದರು ಮತ್ತು ಜವಾಹರಲಾಲ್ ನೆಹರು ಬಂದರು ನಡುವಿನ ಸಂಪರ್ಕವನ್ನು ಹೆಚ್ಚಿಸಲಿದೆ.

ಅಟಲ್ ಸೇತು ತೆರೆದ ರಸ್ತೆ ಟೋಲಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತದ ಮೊದಲ ಸಮುದ್ರ ಸೇತುವೆಯಾಗಿದೆ. ವಾಹನಗಳನ್ನು ನಿಲ್ಲಿಸದೆ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಟೋಲ್ ಬೂತ್‌ಗಳ ಮೂಲಕ ಹಾದುಹೋಗಲು ಅನುವು ಮಾಡಿಕೊಡುತ್ತದೆ.

2018 ರಲ್ಲಿ ಅಟಲ್ ಸೇತು ನಿರ್ಮಾಣದ ಸಮಯದಲ್ಲಿ ಗುಣಮಟ್ಟ ಕಾಪಾಡಲು ಐಐಟಿ ಬಾಂಬೆಯನ್ನು ನಿಯೋಜಿಸಲಾಗಿತ್ತು. ಸೇತುವೆಯ ವಲಯವು ಮಧ್ಯಮ ಭೂಕಂಪನ ಹಾನಿ ಅಪಾಯದ ವಲಯದಲ್ಲಿ ಬರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸವನ್ನು ಮಾಡಲಾಗಿದೆ. ಐಐಟಿ ಬಾಂಬೆಯ ಸಿವಿಲ್ ಇಂಜಿನಿಯರಿಂಗ್ ಮುಖ್ಯಸ್ಥ ಪ್ರೊಫೆಸರ್ ದೀಪಂಕರ್ ಚೌಧರಿ, 6.5 ತೀವ್ರತೆಯ ಭೂಕಂಪಗಳನ್ನು ತಡೆದುಕೊಳ್ಳುವ ಶಕ್ತಿ ಈ ಸೇತುವೆಗೆ ಇದೆ ಎಂದು ಎಂದು ಹೇಳಿದ್ದಾರೆ.

ಸೇತುವೆಯಲ್ಲಿ ಏಕಮುಖ ಪ್ರಯಾಣಕ್ಕೆ ಕಾರುಗಳಿಗೆ 250 ರೂ ದರ ನಿಗದಿಪಡಿಸಲಾಗಿದೆ. ನಿಗಧಿತ ಅವಧಿಯೊಳಗೆ ಹಿಂದುರಿಗಿದರೆ ಒಟ್ಟು ಶುಲ್ಕ 375 ರೂ ಇರಲಿದೆ. ವಿರೋಧ ಪಕ್ಷಗಳು ಇದು ತುಂಬಾ ಹೆಚ್ಚು ಎಂದು ದೂಷಿಸಿದರೂ, ಏಕಮುಖ ಸಂಚಾರದಲ್ಲಿ ಒಂದು ವಾಹನ 500 ರೂ. ವಿನ ಇಂಧನ ಉಳಿತಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರದಿಂದ ಈ ಸೇತುವೆ ಸಂಚಾರಕ್ಕೆ ಮುಕ್ತವಾಗದಲಿದೆ. ನಾಲ್ಕು ಚಕ್ರಗಳ ವೇಗದ ಮಿತಿ ಗಂಟೆಗೆ 100 ಕಿ.ಮೀ. ಇರಲಿದೆ. ದ್ವಿಚಕ್ರ ವಾಹನ, ಆಟೋ ರಿಕ್ಷಾ, ಟ್ರ್ಯಾಕ್ಟರ್‌ ಮತ್ತು ಮತ್ತು ನಿಧಾನವಾಗಿ ಚಲಿಸುವ ವಾಹನಗಳಿಗೆ ಈ ಸೇತುವೆಯ ಮೇಲೆ ಸಂಚರಿಸಲು ಅನುಮತಿಯಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News