ಬೆಲೆ ನಿಯಂತ್ರಣಕ್ಕಾಗಿ ಸರಕಾರದಿಂದ ಹೆಚ್ಚಿನ ಮಾರಾಟ: ಏಳು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ಗೋದಿ ದಾಸ್ತಾನು

Update: 2023-12-09 11:55 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ದೇಶದ ಸರಕಾರಿ ಗೋದಾಮುಗಳಲ್ಲಿ ಗೋದಿ ದಾಸ್ತಾನು 19 ಮಿಲಿಯನ್ ಟನ್‌ಗೆ ಕುಸಿದಿದ್ದು, ಇದು ಕಳೆದ ಏಳು ವರ್ಷಗಳಲ್ಲಿ ಕನಿಷ್ಠವಾಗಿದೆ ಎಂದು ಎರಡು ಸರಕಾರಿ ಮೂಲಗಳು ಶುಕ್ರವಾರ ತಿಳಿಸಿವೆ. ಎರಡು ವರ್ಷಗಳಲ್ಲಿ ಗೋದಿ ಉತ್ಪಾದನೆಯಲ್ಲಿ ಕುಸಿತದಿಂದಾಗಿ ಸರಕಾರಿ ಏಜೆನ್ಸಿಗಳು ಖಾಸಗಿ ವ್ಯಾಪಾರಿಗಳಿಗೆ ಹೆಚ್ಚೆಚ್ಚು ಗೋದಿಯನ್ನು ಮಾರಾಟ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ.

ಕಳೆದ ವರ್ಷ ಉಷ್ಣ ಮಾರುತದಿಂದಾಗಿ ಗೋದಿ ಉತ್ಪಾದನೆಯಲ್ಲಿ ಕುಸಿತ ಮತ್ತು ಉಕ್ರೇನ್ ಮೇಲೆ ರಶ್ಯಾದ ಆಕ್ರಮಣದಿಂದಾಗಿ ಜಾಗತಿಕ ಬೆಲೆಗಳು ಏರಿಕೆಯಾಗಿ ಸಾಗರೋತ್ತರ ಮಾರಾಟ ಹೆಚ್ಚಿದ ಬಳಿಕ ವಿಶ್ವದ ಎರಡನೇ ಅತಿ ದೊಡ್ಡ ಗೋದಿ ಉತ್ಪಾದಕ ದೇಶವಾಗಿರುವ ಭಾರತವು ಅದರ ರಫ್ತನ್ನು ನಿಷೇಧಿಸಿತ್ತು.

2023ರಲ್ಲಿ ಈವರೆಗೆ ಅಮೆರಿಕದಲ್ಲಿ ಗೋದಿಯ ಬೆಲೆಗಳಲ್ಲಿ ಶೇ.35ಕ್ಕೂ ಅಧಿಕ ಇಳಿಕೆಯಾಗಿದ್ದರೆ, ಭಾರತದಲ್ಲಿ ರಫ್ತನ್ನು ನಿಷೇಧಿಸಲಾಗಿದ್ದರೂ ಕಳೆದ ಕೆಲವು ತಿಂಗಳುಗಳಲ್ಲಿ ಬೆಲೆಗಳು ಶೇ.20ಕ್ಕೂ ಅಧಿಕ ಏರಿಕೆಯಾಗಿವೆ.

ವ್ಯಾಪಾರಿಗಳ ಪ್ರಕಾರ ಈ ವರ್ಷ ದೇಶಿಯ ಗೋದಿ ಉತ್ಪಾದನೆಯು 112.74 ಮಿ.ಟನ್‌ಗಳ ದಾಖಲೆ ಉತ್ಪಾದನೆಯ ಅಂದಾಜಿಗಿಂತ ಕನಿಷ್ಠ ಶೇ.10ರಷ್ಟು ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗಿದೆ.

ಸರಕಾರವು ತನ್ನ 34.15 ಮಿ.ಟನ್‌ಗಳ ಗುರಿಗೆ ಹೋಲಿಸಿದರೆ ಈ ವರ್ಷ ಸ್ಥಳೀಯ ಕೃಷಿಕರಿಂದ ಕೇವಲ 26.2 ಮಿ.ಟನ್ ಗೋದಿಯನ್ನು ಖರೀದಿಸಿದ್ದು,ಇದು ದೇಶದಲ್ಲಿ ಗೋದಿ ಉತ್ಪಾದನೆ ಕುಸಿದಿದೆ ಎನ್ನುವುದಕ್ಕೆ ಇನ್ನೊಂದು ಸೂಚಕವಾಗಿದೆ.

ಆದರೆ ಪೂರೈಕೆಯಲ್ಲಿ ಕೊರತೆಯ ಹೊರತಾಗಿಯೂ ಪ್ರಸಕ್ತ ಶೇ.40 ತೆರಿಗೆಯನ್ನು ತಗ್ಗಿಸುವ ಅಥವಾ ರದ್ದುಗೊಳಿಸುವ ಅಥವಾ ರಶ್ಯಾದಂತಹ ಪ್ರಮುಖ ಪೂರೈಕೆದಾರ ದೇಶಗಳಿಂದ ನೇರವಾಗಿ ಖರೀದಿಸುವ ಮೂಲಕ ಆಮದುಗಳನ್ನು ಸುಗಮಗೊಳಿಸಲು ಕರೆಗಳನ್ನು ಸರಕಾರವು ಕಡೆಗಣಿಸಿದೆ. ಬದಲಾಗಿ ಸರಕಾರವು ದೇಶಿಯ ಬೆಲೆಗಳನ್ನು ತಗ್ಗಿಸಲು ಹಿಟ್ಟಿನ ಗಿರಣಿಗಳು ಮತ್ತ ಬಿಸ್ಕಿಟ್ ತಯಾರಕರಂತಹ ಸಗಟು ಖರೀದಿದಾರರಿಗೆ ಗೋದಿಯನ್ನು ಮಾರಾಟ ಮಾಡಲು ಮೀಸಲು ದಾಸ್ತಾನಿಗೆ ಕೈ ಹಾಕಿದೆ.

ದಾಸ್ತಾನು ಕಡಿಮೆಯಾಗಿದೆ, ಆದರೆ ಬೆಲೆಗಳು ತೀವ್ರವಾಗಿ ಏರುವುದನ್ನು ತಡೆಯಲು ಸರಕಾರವು ಇನ್ನೂ ಸಾಕಷ್ಟು ದಾಸ್ತಾನನ್ನು ಹೊಂದಿದೆ. ಅಗತ್ಯವಾದರೆ ಸರಕಾರವು ಇನ್ನೂ ಹೆಚ್ಚಿನ ಗೋದಿಯನ್ನು ಮಾರುಕಟ್ಟೆಗೆ ಪೂರೈಸಬಹುದು. ಮುಂದಿನ ಬೆಳೆಗಳು ಮಾರುಕಟ್ಟೆಗೆ ಬರುವವರೆಗೆ ಸಾಕಷ್ಟು ಗೋದಿ ದಾಸ್ತಾನನ್ನು ಸರಕಾರವು ಹೊಂದಿದೆ ಎಂದು ಬಲ್ಲ ಮೂಲಗಳು ತಿಳಿಸಿದವು.

ರೈತರು ತಮ್ಮ ದಾಸ್ತಾನುಗಳನ್ನು ಮಾರಾಟ ಮಾಡಿದ್ದಾರೆ ಮತ್ತು ಹಿಟ್ಟಿನ ಗಿರಣಿಗಳ ಬಳಿ ದಾಸ್ತಾನು ಕುಸಿದಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಗಿರಣಿಗಳು ತಮಗೆ ಅಗತ್ಯವಿರುವ ಗೋದಿಯನ್ನು ಭಾರತೀಯ ಆಹಾರ ನಿಗಮವು ನಡೆಸುವ ಹರಾಜುಗಳಲ್ಲಿ ಖರೀದಿಸುತ್ತಿವೆ. ಆದರೆ ಇದು ಬೆಲೆಗಳ ಸ್ಥಿರತೆಗಾಗಿ ಹೆಚ್ಚಿನ ದಾಸ್ತಾನನ್ನು ಮಾರಾಟ ಮಾಡುವುದನ್ನು ಶೀಘ್ರ ಸರಕಾರಕ್ಕೆ ಅನಿವಾರ್ಯವಾಗಿಸಲಿದೆ. ಇದರಿಂದಾಗಿ ಎ.1ರಂದು ಹೊಸ ಮಾರಾಟ ವರ್ಷವು ಆರಂಭಗೊಂಡಾಗ ದಾಸ್ತಾನು ವಾಡಿಕೆಯ 7.46 ಮಿ.ಟನ್‌ಗಳಿಗೆ ಬದಲಾಗಿ ಆರು ಮಿ.ಟನ್‌ಗೂ ಕಡಿಮೆ ಪ್ರಮಾಣಕ್ಕೆ ಕುಸಿಯಲಿದೆ ಎಂದು ಮುಂಬೈನ ವಿತರಕರೋರ್ವರು ಹೇಳಿದರು. ಇದನ್ನು ಎದುರಿಸಲು ಸರಕಾರವು ಮಾರುಕಟ್ಟೆ ಹಸ್ತಕ್ಷೇಪಕ್ಕಾಗಿ ಸಾಕಷ್ಟು ಗೋದಿಯನ್ನು ಹೊಂದಿರಲು ಆಮದುಗಳನ್ನು ಆರಂಭಿಸುವುದು ಅತ್ಯಗತ್ಯವಾಗಿದೆ. ಜಾಗತಿಕ ಬೆಲೆಗಳು ಇಳಿದಿರುವುದು ಖರೀದಿಗೆ ಸದವಕಾಶವಾಗಿದೆ ಎಂದರು.

ಭಾರತೀಯ ರೈತರು ಪ್ರಸ್ತುತ ಗೋದಿಯನ್ನು ನಾಟಿ ಮಾಡುತ್ತಿದ್ದು, ಮಾರ್ಚ್ ವೇಳೆಗೆ ಕೊಯ್ಲು ಆರಂಭವಾಗಲಿದೆ.

ಹೆಚ್ಚಿನ ಬೆಲೆಗಳು ಹೆಚ್ಚೆಚ್ಚು ಗೋದಿಯನ್ನು ಬೆಳೆಯಲು ರೈತರನ್ನು ಉತ್ತೇಜಿಸುತ್ತವೆ ಎಂದು ವ್ಯಾಪಾರ ಮತ್ತು ಉದ್ಯಮ ರಂಗವು ಭಾವಿಸಿತ್ತು. ಆದರೆ ಶುಷ್ಕ ಹವಾಮಾನದಿಂದಾಗಿ ಮಣ್ಣಿನಲ್ಲಿಯ ತೇವಾಂಶವು ಕಡಿಮೆಯಾಗಿದ್ದು,ಜಲಾಶಯಗಳಲ್ಲಿ ನೀರಿನ ಮಟ್ಟವೂ ಕಡಿಮೆಯಾಗಿದೆ. ಹೀಗಾಗಿ ಗೋದಿಯ ನಾಟಿಯು ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ.

ಕೊಯ್ಲಿನ ಸಮಯದಲ್ಲಿ ತಾಪಮಾನಗಳಲ್ಲಿ ಯಾವುದೇ ಅಸಹಜ ಏರಿಕೆಯು ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಇನ್ನೊಂದು ಅಂಶವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News