ಕೀಳು ರಾಜಕೀಯ | ಪ್ರಧಾನಿ ವಿರುದ್ಧ ಹಿಂಸೆಗೆ ರಾಹುಲ್ ಪ್ರೋತ್ಸಾಹ ಎಂದಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು

Update: 2024-07-15 15:34 GMT

 ನರೇಂದ್ರ ಮೋದಿ , ರಾಹುಲ್ ಗಾಂಧಿ | PTI 

ಹೊಸದಿಲ್ಲಿ : ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹಿಂಸಾಚಾರಕ್ಕೆ ಉತ್ತೇಜನ ನೀಡಿದ್ದಾರೆ ಎಂಬ ಆರೋಪಕ್ಕಾಗಿ ಸೋಮವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್,ನಾಯಕರ ಭದ್ರತೆಯ ವಿಷಯದಲ್ಲಿ ಕೀಳು ರಾಜಕೀಯವನ್ನು ಮಾಡಬಾರದು ಎಂದು ಹೇಳಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯತ್ನದ ಬಳಿಕ ರವಿವಾರ ಬಿಜೆಪಿ ರಾಹುಲ್ ರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು.

‘ಅಧಿಕಾರಕ್ಕೇರಲು ಮೂರನೇ ಬಾರಿ ವಿಫಲಗೊಂಡಿರುವ ರಾಹುಲ್ ಗಾಂಧಿ ಆಗಾಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹಿಂಸಾಚಾರವನ್ನು ಉತ್ತೇಜಿಸಿದ್ದಾರೆ ಮತ್ತು ಸಮರ್ಥಿಸಿಕೊಂಡಿದ್ದಾರೆ. ಪಂಜಾಬ್ ನಲ್ಲಿ ಮೋದಿಯವರ ವಾಹನಗಳ ಸಾಲು ಫ್ಲೈಓವರ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾಗ ಆಗ ಕಾಂಗ್ರೆಸ್ ಸರಕಾರದ ಅಧೀನದಲ್ಲಿದ್ದ ಪಂಜಾಬ್ ಪೋಲಿಸರು ಪ್ರಧಾನಿ ಭದ್ರತೆಯ ವಿಷಯದಲ್ಲಿ ಉದ್ದೇಶಪೂರ್ವಕ ರಾಜಿಯನ್ನು ಮಾಡಿಕೊಂಡಿದ್ದನ್ನು ಭಾರತ ಎಂದಾದರೂ ಮರೆಯಲು ಸಾಧ್ಯವೇ?’ ಎಂದು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದರು.

ಸೋಮವಾರ ಬಿಜೆಪಿಗೆ ತಿರುಗೇಟು ನೀಡಿದ ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ ಖೇರಾ ಅವರು,‘ನಾಯಕರ ಭದ್ರತೆಯ ವಿಷಯದಲ್ಲಿ ಕೀಳು ರಾಜಕೀಯವನ್ನು ಮಾಡಬಾರದು. ಕಾಂಗ್ರೆಸ್ ಪಕ್ಷವು ಬಲಪಂಥೀಯ ಭಯೋತ್ಪಾದಕರಿಂದಾಗಿ ಮಹಾತ್ಮಾ ಗಾಂಧೀಜಿಯವರನ್ನು ಕಳೆದುಕೊಂಡಿದೆ. ಭಯೋತ್ಪಾದಕರಿಂದಾಗಿ ನಾವು ಇಬ್ಬರು ಪ್ರಧಾನಿಗಳನ್ನು ಕಳೆದುಕೊಂಡಿದ್ದೇವೆ. ಎಡಪಂಥೀಯ ಭಯೋತ್ಪಾದಕರಿಂದಾಗಿ ಬಿಜೆಪಿ ಸರಕಾರದ ಕಣ್ಗಾವಲಿನಲ್ಲಿ ನಾವು ಛತ್ತೀಸ್‌ ಗಡದ ನಮ್ಮ ಇಡೀ ನಾಯಕತ್ವವನ್ನು ಕಳೆದುಕೊಂಡಿದ್ದೇವೆ ’ ಎಂದು ಹೇಳಿದರು.

ಜವಾಹರಲಾಲ್ ನೆಹರು,ಇಂದಿರಾ ಗಾಂಧಿ ಮತ್ತು ಇಡೀ ಕುಟುಂಬದ ವಿರುದ್ಧ ಅಪ್ಪಟ ಸುಳ್ಳುಗಳನ್ನು ಹರಡುವ ಮೂಲಕ ಪ್ರಧಾನಿ ಮೋದಿ ಮತ್ತು ಇಡೀ ಬಿಜೆಪಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ ಖೇರಾ,ಮೋದಿಯವರು ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ನಿಗೂಢವಾಗಿ ಹಿಂದೆಗೆದುಕೊಂಡಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News