ಉತ್ತಮ ಜೀವನಕ್ಕಾಗಿ ದತ್ತು ಪಡೆಯುವವರಿಗಾಗಿ ಎದುರು ನೋಡುತ್ತಿವೆ ಮುಗ್ದ ಜೀವಗಳು
ಹೊಸದಿಲ್ಲಿ: ಶಿಶುಗಳ ದತ್ತು ಸ್ವೀಕಾರವು ಮಾನವೀಯ ವಿಷಯವಾಗಿದ್ದು, ಈ ಪ್ರಕ್ರಿಯೆಯಲ್ಲಿ ದೀರ್ಘ ವಿಳಂಬವಾಗುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ ಮತ್ತು ಹಲವಾರು ಮಕ್ಕಳು ಉತ್ತಮ ಜೀವನವನ್ನು ಪಡೆಯುವ ಆಶಾವಾದದೊಂದಿಗೆ ತಮ್ಮನ್ನು ದತ್ತು ಪಡೆಯುವವರಿಗಾಗಿ ಎದುರು ನೋಡುತ್ತಿದ್ದಾರೆಂದು ಹೇಳಿದೆ.
ಭಾರತದಲ್ಲಿ ಮಕ್ಕಳ ದತ್ತು ಸ್ವೀಕಾರದಲ್ಲಿನ ಕಾನೂನು ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಕೋರಿ ಸಲ್ಲಿಸಲಾದ ಎರಡು ಅರ್ಜಿಗಳ ಆಲಿಕೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ದತ್ತು ಸ್ವೀಕಾರ ಕುರಿತ ಕಾನೂನು ಪ್ರಕ್ರಿಯೆಯು ದೇಶದಲ್ಲಿ ವಸ್ತುಶಃ ಸ್ತಬ್ಧಗೊಂಡಿದೆಯೆಂದು, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
20ರ ಹರೆಯದ ದಂಪತಿಯು ಮಗುವೊಂದನ್ನು ದತ್ತು ತೆಗೆದುಕೊಳ್ಳಲು ನಾಲ್ಕು ವರ್ಷಗಳ ಕಾಲ ಕಾಯಬೇಕಾಗುತ್ತದೆ. ವರ್ಷಗಳು ಸರಿದಂತೆ ತಾವು ದತ್ತುತೆಗೆದುಕೊಳ್ಳುವ ಮಗುವಿನ ಕುರಿತಾದ ಅವರ ನಿಲುವು ಬದಲಾಗುವ ಸಾಧ್ಯತೆಗಳೂ ಉಂಟಾಗುತ್ತವೆ ಎಂದು ಅದು ಅಭಿಪ್ರಾಯಿಸಿತು.
ಅವರು (ಕೇಂದ್ರ ದತ್ತ ಸಂಪನ್ಮೂಲ ಪ್ರಾಧಿಕಾರ ) ಯಾಕೆ ದತ್ತು ಸ್ವೀಕಾರವನ್ನು ಸ್ಥಗಿತಗೊಳಿಸುತ್ತಾರೆ? ಉತ್ತಮ ಜೀವನದ ಭರವಸೆಯೊಂದಿಗೆ ನೂರಾರು ಮಕ್ಕಳು ದತ್ತುಸ್ವೀಕಾರಕ್ಕಾಗಿ ಕಾಯುತ್ತಿರುತ್ತಾರೆ ಎಂದು ಸಿಜೆಐ ಅಭಿಪ್ರಾಯಿಸಿದೆ.
ಕೇಂದ್ರ ಸರಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ಜನರಲ್ (ಎಎಸ್ಜಿ) ಐಶ್ವರ್ಯಾ ಭಾಟಿ ಅವರು.ಈ ಕುರಿತು ತಮ್ಮ ಅಫಿಡವಿಟ್ ಸಿದ್ಧವಾಗಿದ್ದು, ಅದನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗುವುದೆಂದು ತಿಳಿಸಿದರು.
ಅರ್ಜಿದಾರರಲ್ಲೊಬ್ಬರ ಪರವಾಗಿ ಹಾಜರಾದ ನ್ಯಾಯವಾದಿಯೊಬ್ಬರು ದತ್ತು ಸ್ವೀಕಾರ ಪ್ರಕ್ರಿಯೆಯ ಸರಳೀಕರಣದ ಅಗತ್ಯವನ್ನು ಒತ್ತಿ ಹೇಳಿದರು. ಭಿನ್ನ ಸಾಮರ್ಥ್ಯ ಮಕ್ಕಳ ದತ್ತು ಸ್ವೀಕಾರವು ಅತ್ಯಂತ ತಳಮಟ್ಟದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೇಂದ್ರ ದತ್ತ ಸಂಪನ್ಮೂಲ ಪ್ರಾಧಿಕಾರವು ದತ್ತುಸ್ವೀಕಾರಕ್ಕೆ ಅವಾಕಶ ನೀಡುತ್ತಿಲ್ಲ. ದತ್ತುಪಡೆಯಲು ಇಚ್ಛಿಸುತ್ತಿರುವ ಹಲವಾರು ವ್ಯಕ್ತಿಗಳಿದ್ದಾರೆ. ಅವರಲ್ಲಿ ಹೆಚ್ಚಿನವರು ಒಳ್ಳೆಯ ವ್ಯಕ್ತಿಗಳು. ಇದೊಂದು ಮಾನವೀಯ ವಿಚಾರ ’’ ಎಂದು ನ್ಯಾಯಪೀಠ ಅಭಿಪ್ರಾಯಿಸಿತು. ವಾರ್ಷಿಕವಾಗಿ ದೇಶದಲ್ಲಿ ಕೇವಲ 4 ಸಾವಿರ ದತ್ತು ಸ್ವೀಕಾರಗಳು ಮಾತ್ರ ನಡೆಯುತ್ತಿದೆಯೆಂದು ಅವರು ಹೇಳಿದರು. ದತ್ತು ಸ್ವೀಕಾರ ಪ್ರಕ್ರಿಯೆಯಲ್ಲಿರುವ ತೊಂದರೆಗಳನ್ನು ಪ್ರಸ್ತಾವಿಸಿದ್ದ ಅರ್ಜಿದಾರರು ಇದರಿಂದಾಗಿ ಭಾರತವು ಜಗತ್ತಿನ ಅನಾಥರ ರಾಜಧಾನಿಯಾಗಿಬಿಟ್ಟಿದೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ನ್ಯಾಯಪೀಠವು ಪ್ರಕರಣದ ಮುಂದಿನ ಆಲಿಕೆಯನ್ನು ಅ.30ಕ್ಕೆ ಮುಂದೂಡಿದೆ.