ಇತ್ಯರ್ಥಗೊಂಡ ಕಚ್ಚತ್ತೀವು ಬದಲು, ಪ್ರಧಾನಿ ಚೀನಾ ಅತಿಕ್ರಮಣದ ಬಗ್ಗೆ ಮಾತನಾಡಲಿ : ಪಿ.ಚಿದಂಬರಂ

Update: 2024-04-01 16:20 GMT

ಪಿ. ಚಿದಂಬರಂ | Photo: PTI 

ಶಿವಗಂಗಾ : ಪ್ರಧಾನಿ ನರೇಂದ್ರ ಮೋದಿ ಅವರು ಕಚ್ಚತ್ತೀವು ಕುರಿತು ಮಾತನಾಡುವ ಬದಲು ಭಾರತದ ಭೂಭಾಗವನ್ನು ಚೀನಾ ಅತಿಕ್ರಮಿಸುತ್ತಿರುವ ಕುರಿತು ಮಾತನಾಡಬೇಕು ಎಂದು ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಪಿ. ಚಿದಂಬರಂ ಸೋಮವಾರ ಹೇಳಿದ್ದಾರೆ.

ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಹಾಗೂ ಲಕ್ಷಾಂತರ ತಮಿಳರ ಜೀವವನ್ನು ರಕ್ಷಿಸಲು ಕಚ್ಚತ್ತೀವು ಅನ್ನು ಶ್ರೀಲಂಕಾಕ್ಕೆ ಬಿಟ್ಟು ಕೊಡಲಾಯಿತು ಎಂದು ಅವರು ವಿವರಿಸಿದ್ದಾರೆ.

1974ರಲ್ಲಿ ಇತ್ಯರ್ಥವಾದ ಈ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಈಗ ಯಾಕೆ ಪ್ರಶ್ನಿಸುತ್ತಿದ್ದಾರೆ. ಆ ವರ್ಷ ಇಂದಿರಾ ಗಾಂಧಿ ಸರಕಾರ ಶ್ರೀಲಂಕಾದದೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಹಾಗೂ ಅಲ್ಲಿದ್ದ ಲಕ್ಷಾಂತರ ತಮಿಳರಿಗೆ ನೆರವು ನೀಡಲು ಶ್ರೀಲಂಕಾ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು ಎಂದು ಅವರು ಹೇಳಿದ್ದಾರೆ.

ಈ ಒಪ್ಪಂದಕ್ಕೆ ಅನುಗುಣವಾಗಿ ಸುಮಾರು 1.9 ಚದರ ಕಿ.ಮೀ. ವಿಸ್ತೀರ್ಣದ ಹಾಗೂ ಶ್ರೀಲಂಕಾಕ್ಕೆ ಸೇರಿದ್ದು ಎಂದು ಭಾರತ ಒಪ್ಪಿಕೊಂಡಿದ್ದ ಕಚ್ಚತ್ತೀವು ದ್ವೀಪದ ವಿವಾದವನ್ನು ಇತ್ಯರ್ಥಗೊಳಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ 6 ಲಕ್ಷ ತಮಿಳರು ಭಾರತಕ್ಕೆ ಆಗಮಿಸಲು ಅವಕಾಶ ನೀಡಲಾಯಿತು ಎಂದು ಅವರು ತಿಳಿಸಿದ್ದಾರೆ.

‘‘ಅವರು ಇಲ್ಲಿಗೆ ಬಂದಿದ್ದಾರೆ. ಅವರ ಕುಟುಂಬ ಇಲ್ಲಿದೆ. ಅವರು ಸಂಪೂರ್ಣ ಸ್ವಾತಂತ್ರ್ಯ ಪಡೆದುಕೊಂಡಿದ್ದಾರೆ. ಅವರು ಇಲ್ಲಿನ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಇಲ್ಲಿದ್ದಾರೆ. ಈ ವಿಷಯ 50 ವರ್ಷಗಳ ಹಿಂದೆ ಇತ್ಯರ್ಥಗೊಂಡಿದೆ’’ ಎಂದು ಅವರು ಹೇಳಿದರು.

‘‘ಈಗ ಪ್ರಧಾನಿ ಅವರು 2,000 ಚದರ ಕಿ.ಮೀ. ವಿಸ್ತೀರ್ಣದ ಭಾರತೀಯ ಭೂಭಾಗವನ್ನು ಚೀನಾ ಪಡೆ ಸ್ವಾಧೀನಪಡಿಸಿಕೊಂಡಿರುವ ಬಗ್ಗೆ ಮಾತನಾಡದೆ, ಕಚ್ಚತ್ತೀವು ಕುರಿತು ಯಾಕೆ ಮಾತನಾಡುತ್ತಿದ್ದಾರೆ’’ ಎಂದು ಅವರು ಪ್ರಶ್ನಿಸಿದರು.

ಲಡಾಖ್ ಸಂಸದ (ಜಮ್ಯಂಗ್ ತ್ಸೆರಿಂಗ್ ನಾಮ್ಗ್ಯಾಲ್) ಇದರ ಬಗ್ಗೆ ಗಮನ ಸೆಳೆದಿದ್ದಾರೆ. ಆದರೆ, ಪ್ರಧಾನಿ ಅವರು ಭಾರತದ ಭೂಭಾಗದೊಳಗೆ ಚೀನಾ ಪಡೆ ಇಲ್ಲ. ಭಾರತದ ಯಾವುದೇ ಭೂಭಾಗ ಚೀನಾ ಪಡೆಯ ಸ್ವಾಧೀನದಲ್ಲಿ ಇಲ್ಲ ಎಂದು ಹೇಳಿದ್ದಾರೆ ಎಂದರು.

ಪ್ರಧಾನಿ ಅವರು 50 ವರ್ಷಗಳ ಹಿಂದೆ ನಡೆದ ಘಟನೆ ಕುರಿತು ಮಾತನಾಡುವ ಬದಲು, 2-3 ವರ್ಷಗಳ ಹಿಂದೆ ನಡೆದ ಘಟನೆ ಕುರಿತು ಮಾತನಾಡಬೇಕು. ಉತ್ತಮ ಬಾಂಧವ್ಯವನ್ನು ಕಾಪಾಡಲು ಹಾಗೂ ಲಕ್ಷಾಂತರ ತಮಿಳರ ಜೀವವನ್ನು ರಕ್ಷಿಸಲು ಮಾತುಕತೆ ಮೂಲಕ 1974ರಲ್ಲಿ ಕಚ್ಚೆತ್ತೀವು ವಿವಾದ ಇತ್ಯರ್ಥಗೊಳಿಸಲಾಯಿತು ಎಂದು ಚಿದಂಬರಂ ಹೇಳಿದರು.

ಚೀನಾ ಬಲವಂತವಾಗಿ ನಮ್ಮ ಭೂಭಾಗವನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಈ ಬಗ್ಗೆ ಮಾತನಾಡಿ ಎಂದು ನಾನು ಪ್ರಧಾನಿ ಅವರಲ್ಲಿ ವಿನಂತಿಸುತ್ತೇನೆ ಎಂದು ಚಿದಂಬರಂ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News