ವಿಚಾರವಾದಿ ದಾಭೋಲ್ಕರ್ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಖುಲಾಸೆಗೆ ಕೋರಿದ ಸಿಬಿಐನ ಅಂತಿಮ ವರದಿ
ಪುಣೆ: ಹಿರಿಯ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣದಲ್ಲಿ ತನ್ನ ಅಂತಿಮ ವರದಿಯನ್ನು ಸಿಬಿಐ ಪುಣೆಯ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದೆ. ಆರೋಪಿಗಳಾದ ಅಮೋಲ್ ಕಾಳೆ, ರಾಕೇಶ್ ಬಂಗೇರಾ ಮತ್ತು ಅಮಿತ್ ದಿಗ್ವೇಕರ್ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಬಹುದಾದ ಯಾವುದೇ ಸಾಕ್ಷ್ಯಾಧಾರಗಳು ಲಭಿಸಿಲ್ಲ, ಹೀಗಾಗಿ ಅವರನ್ನು ಖುಲಾಸೆಗೊಳಿಸುವಂತೆ ಸಿಬಿಐ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
2018 ಸೆಪ್ಟಂಬರ್ ನಲ್ಲಿ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಅದೇ ವರ್ಷದ ಡಿಸೆಂಬರ್ ನಲ್ಲಿ ಪುಣೆಯ ನ್ಯಾಯಾಲಯವೊಂದು ಅವರಿಗೆ ಡಿಫಾಲ್ಟ್ ಅಥವಾ ಕಾನೂನುಬದ್ಧ ಜಾಮೀನು (ನಿಗದಿತ ಅವಧಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸರು ವಿಫಲಗೊಂಡಾಗ ನೀಡುವ ಜಾಮೀನು) ಮಂಜೂರು ಮಾಡಿತ್ತು.
ತನ್ನ ವರದಿಯನ್ನು ಪರಿಗಣಿಸುವಂತೆ ಮತ್ತು ಪ್ರಕರಣದಲ್ಲಿ ಮುಂದಿನ ತನಿಖೆಯನ್ನು ಮುಕ್ತಾಯಗೊಳಿಸಲು ಅನುಮತಿಯನ್ನು ನೀಡುವಂತೆ ಸಿಬಿಐ ನ್ಯಾಯಾಲಯವನ್ನು ಕೋರಿದೆ.
ಹೊಸ ಸಾಕ್ಷ್ಯಾಧಾರವೇನಾದರೂ ಬೆಳಕಿಗೆ ಬಂದರೆ ನ್ಯಾಯಾಲಯದ ಅನುಮತಿಯೊಂದಿಗೆ ಸಿಬಿಐ ಮುಂದಿನ ತನಿಖೆಯನ್ನು ನಡೆಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿಯ ವ್ಯಾಪಕ ಸಂಚನ್ನು ಬಯಲಿಗೆಳೆಯಲು ಶೂಟರ್ ಗಳು ಎಂದು ಆರಂಭದಲ್ಲಿ ಗುರುತಿಸಲಾಗಿದ್ದ, ಸದ್ಯ ತಲೆಮರೆಸಿಕೊಂಡಿರುವ ಸಾರಂಗ ಅಕೋಲ್ಕರ್ ಮತ್ತು ವಿನಯ ಪವಾರ್ ಅವರ ವಿಚಾರಣೆಯು ಅಗತ್ಯವಾಗಿದೆ. ಅವರನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದೂ ವರದಿಯು ಹೇಳಿದೆ.
ವಿಶೇಷ ಸರಕಾರಿ ವಕೀಲ ಪ್ರಕಾಶ ಸೂರ್ಯವಂಶಿ ಅವರೂ ಸಿಬಿಐ ಪರವಾಗಿ ಲಿಖಿತ ಹೇಳಿಕೆಯನ್ನು ಸಲ್ಲಿಸಿ,ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸಿರುವ ‘ಪ್ರಮುಖ ಸಂಚುಕೋರ’ ವೀರೇಂದ್ರ ತಾವ್ಡೆ, ಶೂಟರ್ ಗಳೆನ್ನಲಾದ ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಹಾಗೂ ಇತರ ಇಬ್ಬರ ವಿರುದ್ಧ ಸಾಕ್ಷ್ಯ ಮುಕ್ತಾಯದ ಕುರಿತು ಮಾಹಿತಿ ನೀಡಿದ್ದಾರೆ. ಸಿಬಿಐ ಅಂತಿಮ ವರದಿಗೆ ಸೆ.18ರೊಳಗೆ ಲಿಖಿತ ಉತ್ತರವನ್ನು ಸಲ್ಲಿಸುವಂತೆ ವಿಶೇಷ ನ್ಯಾಯಾಧೀಶ ಪಿ.ಪಿ.ಜಾಧವ ಅವರು ಪ್ರತಿವಾದಿಗಳ ಪರ ವಕೀಲರಿಗೆ ಸೂಚಿಸಿದ್ದಾರೆ.
2013,ಆ.20ರಂದು ಪುಣೆಯ ಓಂಕಾರೇಶ್ವರ ದೇವಸ್ಥಾನದ ಸಮೀಪದ ವಿಠಲ ರಾಮಜಿ ಶಿಂದೆ ಸೇತುವೆಯ ಮೇಲೆ ಬೆಳಗಿನ ವಾಯುವಿಹಾರ ಮಾಡುತ್ತಿದ್ದ ದಾಭೋಲ್ಕರ್ ಅವರನ್ನು ಬೈಕ್ ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳಿಬ್ಬರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ಬೆಂಗಳೂರಿನಲ್ಲಿ 2017, ಸೆ.5ರಂದು ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಕರ್ನಾಟಕದ ವಿಶೇಷ ತನಿಖಾ ತಂಡದ ಮತ್ತು ನಾಲಾಸೋಪಾರ ಶಸ್ತ್ರಾಸ್ತ್ರಗಳ ವಶ ಪ್ರಕರಣದಲ್ಲಿ ಮಹಾರಾಷ್ಟ್ರ ಎಟಿಎಸ್ ನಿಂದ ತನಿಖೆಗಳ ಸಂದರ್ಭದಲ್ಲಿ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಕಾಳೆ, ಬಂಗೇರಾ ಮತ್ತು ದಿಗ್ವೇಕರ್ ಭಾಗಿಯಾಗಿದ್ದಾರೆ ಎನ್ನುವುದು ಬೆಳಕಿಗೆ ಬಂದಿತ್ತು. ಈ ಮೂವರು ಗೌರಿ ಲಂಕೇಶ್ ಕೊಲೆ ಆರೋಪಿಗಳಲ್ಲಿ ಸೇರಿದ್ದಾರೆ.
ಕಾಳೆ ಮತ್ತು ದಿಗ್ವೇಕರ್ 2015,ಫೆ.20ರಂದು ಕೊಲ್ಲಾಪುರದಲ್ಲಿ ನಡೆದಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿಯೂ ಆರೋಪಿಗಳಾಗಿದ್ದಾರೆ. ಎಲ್ಲ ಮೂವರು ಆರೋಪಿಗಳು ಪ್ರಸ್ತುತ ಬೆಂಗಳೂರು ಜೈಲಿನಲ್ಲಿದ್ದಾರೆ.