ಪಂಜಾಬಿನ ವಿವಿಧೆಡೆ ಫೆ.24ರವರೆಗೆ ಇಂಟರ್ನೆಟ್ ಸೇವೆ ಸ್ಥಗಿತ
ಹೊಸದಿಲ್ಲಿ : ಕೇಂದ್ರ ಗೃಹ ಸಚಿವಾಲಯದ ಆದೇಶದನ್ವಯ ಪಾಟಿಯಾಲ, ಸಂಗ್ರೂರ್ ಹಾಗೂ ಫತೇಗಡ ಸಾಹಿಬ್ ಸೇರಿದಂತೆ ಪಂಜಾಬ್ ಕೆಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳ ಸ್ಥಗಿತವನ್ನು ಫೆಬ್ರವರಿ 24ರವರೆಗೆ ವಿಸ್ತರಿಸಲಾಗಿದೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬಿನ ರೈತರು ದಿಲ್ಲಿ ಚಲೋ ಜಾಥಾ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಫೆಬ್ರವರಿ 12ರಿಂದ 16ನೇ ತಾರೀಕಿನವರೆಗೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಅದನ್ನು ಇನ್ನೂ 8 ದಿನಗಳ ಕಾಲ ವಿಸ್ತರಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಫೆಬ್ರವರಿ 16 ಆದೇಶದ ಪ್ರಕಾರ ಪಾಟಿಯಾಲ ಜಿಲ್ಲೆಯ ಶಂಭು, ಜುಲ್ಕಾನ್, ಪಾಸ್ಸಿಯಾನ್, ಪಟ್ರಾನ್,ಶತ್ರಾನಾ, ಸಮಾನಾ, ಘನೌರ್, ದೇವಗಢ , ಮೊಹಾಲಿ ಜಿಲ್ಲೆಯ ಲಾಲ್ರು , ಮುಕ್ತಸರ್ ಜಿಲ್ಲೆಯ ಕಿಲ್ಲಿಯಾನ್ವಾಲಿ , ಮಾನ್ಸಾದ ಶಾರ್ದೂಲ್ಗಡ ಹಾಗೂ ಬೊಹಾ, ಸಂಗ್ರೂರ್ ಜಿಲ್ಲೆಯ ಖನೌರಿ, ಮೂನಕ್, ಲೆಹ್ರಾ, ಸುನಾಮ್ ಹಾಗೂ ಚಾಜ್ಲಿ ಮತ್ತು ಫತೇಗಡ ಸಾಹೀಬ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
1885ರ ಟೆಲಿಗ್ರಾಫ್ ಕಾಯ್ದೆಯಡಿ ತನಗಿರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು, ಕೇಂದ್ರ ಸರಕಾರವು ಈ ಪ್ರದೇಶಗಳಲ್ಲಿ ಇಂಟರ್ನೆಟ್ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಫೆಬ್ರವರಿ 15ರಂದು ಕೇಂದ್ರದ ಮೂವರು ಸಚಿವರು ಹಾಗೂ ರೈತ ನಾಯಕರೊಂದಿಗೆ ಚಂಡೀಗಡದಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಪಂಜಾಬಿನ ಆಯ್ದ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿರುವುದಕ್ಕೆ ಮುಖ್ಯಮಂತ್ರಿ ಭಗವಂತ ಮಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಹರ್ಯಾಣದ ವಿವಿಧೆಡೆ ಮೊಬೈಲ್ ಇಂಟರ್ನೆಟ್ ಸೇವೆಗಳ ಸ್ಥಗಿತ ಫೆ.19ರವರೆಗೆ ವಿಸ್ತರಣೆ
ಈ ಮಧ್ಯೆ ರೈತ ಪ್ರತಿಭಟನೆಯ ಕಾವು ಹೆಚ್ಚುತ್ತಿರುವ ಹರ್ಯಾಣದ ವಿವಿಧೆಡೆ ಅಲ್ಲಿನ ರಾಜ್ಯ ಸರಕಾರವು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಹಾಗೂ ದೊಡ್ಡ ಪ್ರಮಾಣದಲ್ಲಿ (ಬಲ್ಕ್) ಎಸ್ಎಂಎಸ್ ಸಂದೇಶಗಳ ರವಾನೆಯನ್ನು ಫೆ.19ರವರೆಗೆ ಸ್ಥಗಿತಗೊಳಿಸಿದೆ.
ಅಂಬಾಲ, ಕುರುಕ್ಷೇತ್ರ, ಕೈದಾಲ್, ಜಿಂದ್, ಹಿಸಾರ್, ಫತೇಹಬಾದ್ ಹಾಗೂ ಸಿರ್ಸಾ ಜಿಲ್ಲೆಗಳಲ್ಲಿ ಹರ್ಯಾಣ ಸರಕಾರವು ಇಂಟರ್ನೆಟ್ ಸೇವೆ ಹಾಗೂ ಬಲ್ಕ್ ಎಸ್ಎಂಎಸ್ ಸೇವೆಗಳನ್ನು ಅಮಾನತಿನಲ್ಲಿರಿಸಿದೆ.
ಇದಕ್ಕೂ ಮುನ್ನ ಹರ್ಯಾಣ ಸರಕಾರವು ಮೊಬೈಲ್ ಇಂಟರ್ನೆಟ್ ಸೇವೆಗಳ ಅಮಾನತನ್ನು ಫೆಬ್ರವರಿ 13 ಹಾಗೂ 15ರಂದು ಎರಡು ಸಲ ವಿಸ್ತರಿಸಿತ್ತು.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ದಿಲ್ಲಿ ಚಲೋ ಚಳವಳಿಯ ನೇತೃತ್ವವನ್ನು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ವಹಿಸಿಕೊಂಡಿವೆ.
ಪಂಜಾಬಿನ ರೈತರು ಮಂಗಳವಾರದಂದು ದಿಲ್ಲಿ ಚಲೋ ಜಾಥಾವನ್ನು ಆರಂಭಿಸಿದ್ದರು. ಅವರನ್ನು ಪಂಜಾಬ್ ಹಾಗೂ ಹರ್ಯಾಣದ ಗಡಿಯಲ್ಲಿರುವ ಶಂಭು ಹಾಗೂ ಖಾನೌರಿಗಳಲ್ಲಿ ಭದ್ರತಾ ಸಿಬ್ಬಂದಿಗಳು ತಡೆದಿದ್ದಾರೆ. ಅಂದಿನಿಂದ ಪ್ರತಿಭಟನಾ ನಿರತ ರೈತರು ಅಲ್ಲಿಯೇ ಬೀಡುಬಿಟ್ಟು, ಪ್ರತಿಭಟನೆ ಮುಂದುವರಿಸಿದ್ದಾರೆ.