ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಐಒಸಿ, ಬಿಪಿಸಿಎಲ್‌ಗೆ ದಂಡ

Update: 2023-10-22 17:42 GMT

Photo: cpcb.nic.in

ಹೊಸದಿಲ್ಲಿ, ಅ. 22: ತಮ್ಮ ಪೆಟ್ರೋಲ್ ಪಂಪ್‌ಗಳಲ್ಲಿ ಮಾಲಿನ್ಯ ನಿಯಂತ್ರಣ ಸಾಧನಗಳನ್ನು ಸ್ಥಾಪಿಸದೇ ಇರುವುದಕ್ಕಾಗಿ ರಾಜ್ಯ ಸ್ವಾಮಿತ್ವದ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (ಬಿಪಿಸಿಎಲ್)ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದಂಡ ವಿಧಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಐಒಸಿಗೆ 1 ಕೋ. ರೂ. ಹಾಗೂ ಬಿಪಿಸಿಎಲ್‌ಗೆ 2 ಕೋ. ರೂ ದಂಡ ವಿಧಿಸಿದೆ. ಇದನ್ನು ಎರಡೂ ಕಂಪೆನಿಗಳು ಶೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಪ್ರತ್ಯೇಕ ವಿವರಗಳಲ್ಲಿ ತಿಳಿಸಿವೆ.

‘‘ಎನ್‌ಸಿಆರ್‌ನಲ್ಲಿರುವ ಪೆಟ್ರೋಲ್ ಪಂಪ್‌ಗಳಲ್ಲಿ ವೇಪೋರ್ ರಿಕವರಿ ಸಿಸ್ಟಮ್ಸ್ (ವಿಆರ್‌ಎಸ್) ಸ್ಥಾಪಿಸದೇ ಇರುವುದಕ್ಕೆ 1 ಕೋ. ರೂ. ದಂಡ ಪಾವತಿಸುವಂತೆ ಸಿಪಿಸಿಬಿ ನಿರ್ದೇಶನವನ್ನು ಕಂಪೆನಿ ಸ್ವೀಕರಿಸಿದೆ. ಸುಪ್ರೀಂ ಕೋರ್ಟ್‌ನಿಂದ ನಿಗದಿಯಾದ ಸಮಯ ಮಿತಿಯ ಒಳಗಡೆ ಪೆಟ್ರೋಲ್ ಪಂಪ್‌ಗಳಲ್ಲಿ ವಿಆರ್‌ಎಸ್ ಸ್ಥಾಪಿಸದೇ ಇರುವುದಕ್ಕೆ ಈ ದಂಡ ವಿಧಿಸಲಾಗಿದೆ’’ ಎಂದು ಐಒಸಿ ತಿಳಿಸಿದೆ.

‘‘ಇದರಿಂದ ಕಂಪೆನಿಯ ಕಾರ್ಯಾಚರಣೆ ಹಾಗೂ ಇತರ ಚಟುವಟಿಕೆ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ’’ ಎಂದು ಅದು ತಿಳಿಸಿದೆ.

ಶೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಪ್ರತ್ಯೇಕ ವಿವರಣೆಯಲ್ಲಿ ಬಿಪಿಸಿಎಲ್, ‘‘ ಸುಪ್ರೀಂ ಕೋರ್ಟ್ ಹಾಗೂ ಸಿಪಿಸಿಪಿ ಸೂಚಿಸಿದ ಸಮಯ ಮಿತಿ ಒಳಗಡೆ ಪೆಟ್ರೋಲ್ ಪಂಪ್‌ಗಳು ಹಾಗೂ ಶೇಖರಣಾ ಟರ್ಮಿನಲ್‌ಗಳಲ್ಲಿ ವೇಪೋರ್ ರಿಕವರಿ ಸಿಸ್ಟಮ್ಸ್ ಅನ್ನು ಅಳವಡಿಸದೇ ಇರುವುದಕ್ಕೆ ಪರಿಸರ ಸಂರಕ್ಷಣಾ ಕಾಯ್ದೆ-1986ರ ಸೆಕ್ಷನ್ 5ರ ಅಡಿ 2 ಕೋ.ರೂ. ಪಾವತಿಸುವಂತೆ ಸಿಪಿಸಿಬಿಯಿಂದ ನೋಟಿಸು ಸ್ವೀಕರಿಸಲಾಗಿದೆ’’ ಎಂದಿದೆ.

‘‘ನೋಟಿಸ್ ಅನ್ನು ಪರಿಶೀಲಿಸಲಾಗುತ್ತಿದೆ. ಮುಂದುವರಿಯದಂತೆ ಹಾಗೂ ಈ ನೋಟಿಸಿನಿಂದ ಕಂಪೆನಿಯನ್ನು ಮುಕ್ತಗೊಳಿಸುವಂತೆ ಕೋರಿ ಸಿಪಿಸಿಬಿಗೆ ಸೂಕ್ತ ಪ್ರತಕ್ರಿಯೆ ನೀಡಲಾಗುವುದು’’ ಎಂದು ಬಿಪಿಸಿಎಲ್ ಹೇಳಿದೆ.

ಎರಡೂ ಕಂಪೆನಿಗಳು 2023 ಅಕ್ಟೋಬರ್ 19ರಂದು ನೋಟಿಸು ಸ್ವೀಕರಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News