ಇರಾನ್‌ ವಶಪಡಿಸಿಕೊಂಡ ಹಡಗಿನ 17 ಸಿಬ್ಬಂದಿ ಭಾರತೀಯರು

Update: 2024-04-13 16:55 GMT

Photo credit: AP

ಹೊಸದಿಲ್ಲಿ: ಇರಾನಿನ ರೆವೊಲ್ಯೂಷನರಿ ಗಾರ್ಡ್‌ಗಳು ಶನಿವಾರ ಯುಎಇ ಕರಾವಳಿಯಾಚೆ ಸರಕು ಸಾಗಣೆ ಹಡಗೊಂದನ್ನು ವಶಪಡಿಸಿಕೊಂಡಿದ್ದು, ಅದರಲ್ಲಿರುವ 25 ಸಿಬ್ಬಂದಿಗಳಲ್ಲಿ 17 ಭಾರತೀಯರು ಸೇರಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಪರ್ಶಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿಗಳ ನಡುವಿನ ಹೊರ್ಮುಝ್ ಜಲಸಂಧಿಯ ಬಳಿ ಹೆಲಿಕಾಪ್ಟರ್ ಕಾರ್ಯಾಚರಣೆಯ ಮೂಲಕ ಎಂಸಿಎಸ್ ಏರೀಸ್ ಕಂಟೇನರ್ ಹಡಗನ್ನು ವಶಪಡಿಸಿಕೊಳ್ಳಲಾಗಿದ್ದು,ಅದು ಇರಾನಿನ ಜಲಪ್ರದೇಶದತ್ತ ಸಾಗುತ್ತಿದೆ ಎಂದು ಇರಾನ್ ಸರಕಾರಿ ಸ್ವಾಮ್ಯದ ಐಆರ್‌ಎನ್‌ಎ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಈ ಬೆಳವಣಿಗೆ ನಡೆದಿದೆ. ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುವ ಆತಂಕವಿದ್ದು,ಎರಡು ವಾರಗಳ ಹಿಂದೆ ಸಿರಿಯಾದ ಡಮಾಸ್ಕಸ್‌ನಲ್ಲಿ ತನ್ನ ರಾಯಭಾರ ಕಚೇರಿಯ ಕಾನ್ಸುಲರ್ ವಿಭಾಗದ ಮೇಲೆ ಇಸ್ರೇಲ್‌ನ ವಾಯುದಾಳಿಯ ಬಳಿಕ ಪ್ರತೀಕಾರವನ್ನು ಕೈಗೊಳ್ಳುವುದಾಗಿ ಇರಾನ್ ಪಣತೊಟ್ಟಿದೆ. ವಾಯುದಾಳಿಯಲ್ಲಿ ಇಬ್ಬರು ಜನರಲ್‌ಗಳು ಸೇರಿದಂತೆ ಏಳು ಜನರು ಕೊಲ್ಲಲ್ಪಟ್ಟಿದ್ದರು.

ತಾನು ವಶಪಡಿಸಿಕೊಂಡಿರುವ ಹಡಗು ಇಸ್ರೇಲ್‌ಗೆ ಸಂಬಂಧಿಸಿದೆ ಎಂದು ಇರಾನ್ ತಿಳಿಸಿದೆ.

ಕಂಟೇನರ್ ಹಡಗು ಎಂಎಸ್‌ಸಿ ಏರೀಸ್ ಪೋರ್ಚುಗೀಸ್ ಧ್ವಜವನ್ನು ಹೊಂದಿದ್ದು ಕೊನೆಯ ಸಲ ವರದಿಯಾದಾಗ ಅದು ಕೊಲ್ಲಿ ಪ್ರದೇಶದಲ್ಲಿತ್ತು ಎಂದು ಹಡಗುಗಳ ಸಂಚಾರದ ಮೇಲೆ ನಿಗಾಯಿರಿಸುವ ಎರಡು ಜಾಲತಾಣಗಳಾದ vesselfinder.com ಮತ್ತು marinetraffic.com ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News