ಚೊಚ್ಚಲ ಟೆಸ್ಟ್ ವಿಜಯವನ್ನು ದಾಖಲಿಸಿದ ಐರ್ಲ್ಯಾಂಡ್

Update: 2024-03-01 16:51 GMT

Photo: hindustantimes.com

ಅಬುಧಾಬಿ : ಐರ್ಲ್ಯಾಂಡ್ ಶುಕ್ರವಾರ ತನ್ನ ಚೊಚ್ಚಲ ಟೆಸ್ಟ್ ವಿಜಯವನ್ನು ದಾಖಲಿಸಿದೆ. ಅಬುಧಾಬಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಅದು ಶುಕ್ರವಾರ 6 ವಿಕೆಟ್‌ ಗಳಿಂದ ಗೆದ್ದಿದೆ.

ಐರ್ಲ್ಯಾಂಡ್ ತನ್ನ ಎಂಟನೇ ಟೆಸ್ಟ್ ಪಂದ್ಯದಲ್ಲಿ ವಿಜಯವನ್ನು ಗಳಿಸಿದೆ.

ಪಂದ್ಯದ ಮೂರನೇ ದಿನದ ಕೊನೆಯ ಅವಧಿಯ ಆಟದಲ್ಲೇ ಐರ್ಲ್ಯಾಂಡ್ ಗೆಲುವಿನ ತೀರವನ್ನು ತಲುಪಿತು. ಗೆಲುವಿನ 111 ರನ್‌ ಗಳ ಕಿರು ಗುರಿಯನ್ನು ಅದು ಯಶಸ್ವಿಯಾಗಿ ಬೆನ್ನತ್ತಿತು. ನಾಯಕ ಆ್ಯಂಡಿ ಬಾಲ್ಬರ್ನೀ 58 ರನ್‌ ಗಳನ್ನು ಗಳಿಸಿ ಅಜೇಯರಾಗಿ ಉಳಿದರು.

ಐರ್ಲ್ಯಾಂಡ್ ತನ್ನ ಮೊದಲ ಟೆಸ್ಟ್ ಪಂದ್ಯವನ್ನು 2018ರಲ್ಲಿ ಆಡಿತ್ತು. ಆ ಪಂದ್ಯದಲ್ಲಿ ಅದು ಪಾಕಿಸ್ತಾನದ ವಿರುದ್ಧ ಸೋಲನುಭವಿಸಿತ್ತು.

ಅಬುಧಾಬಿಯ ಟೋಲರನ್ಸ್ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದು ಮೊದಲ ಇನಿಂಗ್ಸ್‌ ನಲ್ಲಿ 155 ರನ್‌ ಗಳನ್ನು ಗಳಿಸಿತು.

ಬಳಿಕ, ಐರ್ಲ್ಯಾಂಡ್ ತನ್ನ ಮೊದಲ ಇನಿಂಗ್ಸ್‌ ನಲ್ಲಿ 263 ರನ್‌ ಗಳನ್ನು ಕಲೆ ಹಾಕಿತು. ಅಫ್ಘಾನಿಸ್ತಾನ ತನ್ನ ದ್ವಿತೀಯ ಇನಿಂಗ್ಸ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿ 218 ರನ್‌ ಗಳನ್ನು ಗಳಿಸಿತು.

ಪಂದ್ಯವನ್ನು ಗೆಲ್ಲಲು ಎರಡನೇ ಇನಿಂಗ್ಸ್‌ ನಲ್ಲಿ 111 ರನ್‌ ಗಳನ್ನು ಗಳಿಸಬೇಕಾದ ಗುರಿ ಐರ್ಲ್ಯಾಂಡ್ಗೆ ಎದುರಾಯಿತು. ಈ ಗುರಿಯನ್ನು ಅದು ಕೇವಲ 31.3 ಓವರ್ಗಳಲ್ಲಿ 4 ವಿಕೆಟ್‌ ಗಳನ್ನು ಕಳೆದುಕೊಂಡು ತಲುಪಿತು.

ಶುಕ್ರವಾರ ಅಫ್ಘಾನಿಸ್ತಾನ ತನ್ನ ದ್ವಿತೀಯ ಇನಿಂಗ್ಸನ್ನು 3 ವಿಕೆಟ್‌ ಗಳಿಗೆ 134 ರನ್ನಿಂದ ಮುಂದುವರಿಸಿತು. ಅಂತಿಮವಾಗಿ ಅದು 218 ರನ್‌ ಗಳಿಗೆ ತನ್ನೆಲ್ಲಾ ವಿಕೆಟ್‌ ಗಳನ್ನು ಕಳೆದುಕೊಂಡಿತು.

ನಾಯಕ ಹಶ್ಮತುಲ್ಲಾ ಶಾಹಿದಿ 55 ರನ್ ಗಳಿಸಿ ತಂಡದ ಗರಿಷ್ಠ ರನ್ ಗಳಿಕೆದಾರನಾದರು. ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ರಹ್ಮಾನುಲ್ಲಾ ಗುರ್ಬಾಝ್ 46 ರನ್‌ ಗಳನ್ನು ಸಂಪಾದಿಸಿದರು.

ಮಾರ್ಕ್ ಅಡೇರ್ ಮೂರು ವಿಕೆಟ್‌ ಗಳನ್ನು ಉರುಳಿಸಿ, ಈ ಪಂದ್ಯದಲ್ಲಿ ಪಡೆದ ವಿಕೆಟ್‌ ಗಳ ಸಂಖ್ಯೆಯನ್ನು 8ಕ್ಕೆ ಏರಿಸಿದರು. ಕ್ರೇಗ್ ಯಂಗ್ ಮತ್ತು ಬಾರಿ ಮೇಕಾರ್ಥಿ ತಲಾ ಮೂರು ವಿಕೆಟ್‌ ಗಳನ್ನು ಪಡೆದರು.

ಗೆಲ್ಲಲು 111 ರನ್‌ ಗಳ ಗುರಿಯನ್ನು ಪಡೆದ ಐರ್ಲ್ಯಾಂಡ್ ಒಂದು ಹಂತದಲ್ಲಿ 13 ರನ್‌ ಗಳನ್ನು ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 18 ವರ್ಷದ ವೇಗಿ ನವೀದ್ ಝದ್ರಾನ್ ಆರಂಭಿಕ ಪೀಟರ್ ಮೂರ್ ಮತ್ತು ಕರ್ಟಿಸ್ ಕ್ಯಾಂಫರ್ರನ್ನು ಖಾತೆ ಆರಂಭಿಸುವ ಮೊದಲೇ ಬೌಲ್ಡ್ ಮಾಡಿದರು.

ಬಳಿಕ, ತಂಡದ ಮೊತ್ತ 39 ರನ್ ಆಗಿದ್ದಾಗ ಐರ್ಲ್ಯಾಂಡ್ ಇನ್ನೊಂದು ವಿಕೆಟ್ ಕಳೆದುಕೊಂಡಿತು.

ಆದರೆ, ನಾಯಕ ಬಾಲ್ಬರ್ನೀ ತನ್ನ ನಾಲ್ಕನೇ ಟೆಸ್ಟ್ ಅರ್ಧ ಶತಕವನ್ನು ಬಾರಿಸಿ ತಂಡಕ್ಕೆ ಆಸರೆಯೊದಗಿಸಿದರು. ಅವರಿಗೆ ಲೋರ್ಕನ್ ಟಕರ್ (ಅಜೇಯ 27) ಸಮರ್ಥ ಜೊತೆ ನೀಡಿದರು. ಅವರು 72 ರನ್‌ ಗಳ ಭಾಗೀದಾರಿಕೆಯನ್ನು ನಿಭಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News