ನೀವು ಕುಡಿಯುವ ಹಾಲು ಸುರಕ್ಷಿತವೇ?: ಪಂಜಾಬ್ ನ ಹಲವು ಮಾದರಿಗಳಲ್ಲಿ ಕಲಬೆರಕೆ ಪತ್ತೆ
ಹೊಸದಿಲ್ಲಿ : ದೇಶಾದ್ಯಂತ ತಲಾವಾರು ಹಾಲು ಲಭ್ಯತೆ ಪ್ರಮಾಣ ದೊಡ್ಡ ಪ್ರಮಾಣದಲ್ಲಿಯೇ ಇದ್ದರೂ, ಪಂಜಾಬ್ ನಲ್ಲಿನ ಹಾಲು ಮನುಷ್ಯನ ಸೇವನೆಗೆ ಅಸುರಕ್ಷಿತವಾಗಿರುವುದು ಮುಂದುವರಿದಿದೆ. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಿದ್ದು, ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಪಂಜಾಬ್ ಆಹಾರ ಸುರಕ್ಷತಾ ಘಟಕದ ಬಳಿ ಇರುವ ದತ್ತಾಂಶಗಳಿಂದ ಬಹಿರಂಗವಾಗಿದೆ.
ಎಪ್ರಿಲ್ 2023ರಿಂದ ಫೆಬ್ರವರಿ 2024ರ ನಡುವೆ ಸಂಗ್ರಹಿಸಲಾಗಿರುವ ಕನಿಷ್ಠ ಪಕ್ಷ ಶೇ. 15ರಷ್ಟು ಹಾಲು ಮಾದರಿಗಳು ಆಹಾರ ಸುರಕ್ಷತಾ ಪರೀಕ್ಷೆಯಲ್ಲಿ ವಿಫಲಗೊಂಡಿವೆ. ಇದು 2023-24ನೇ ಸಾಲಿನ ನಂತರದ ತಿಂಗಳುಗಳಲ್ಲಿನ ಸುಮಾರು ಶೇ. 35.5ರಷ್ಟಾಗಿದೆ. ಹೀಗಾಗಿ ಈ ಹಾಲುಗಳು ಮನುಷ್ಯನ ಸೇವನೆಗೆ ಅಸುರಕ್ಷಿತ ಎಂಬುದು ಪಂಜಾಬ್ ಆಹಾರ ಸುರಕ್ಷತೆ ಘಟಕದ ಬಳಿ ಇರುವ ದತ್ತಾಂಶಗಳಿಂದ ತಿಳಿದು ಬಂದಿದೆ.
2022-23ನೇ ಸಾಲಿನಲ್ಲಿ ಸಂಗ್ರಹಿಸಲಾದ 1,400 ಹಾಲು ಮಾದರಿಗಳ ಪೈಕಿ 497 ಮಾದರಿಗಳು ಆಹಾರ ಸುರಕ್ಷತಾ ಮಾನದಂಡವನ್ನು ಪಾಲಿಸಿಲ್ಲದಿರುವುದು ಕಂಡು ಬಂದಿದೆ. ಈ 497 ಹಾಲು ಮಾದರಿಗಳಲ್ಲಿ ಅಸುರಕ್ಷಿತ ಬಾಹ್ಯ ಕೊಬ್ಬು ಕಂಡು ಬಂದಿದೆ ಎಂದು ದತ್ತಾಂಶದಲ್ಲಿ ಹೇಳಲಾಗಿದೆ.
ಇದೇ ಅವಧಿಯಲ್ಲಿ ಶೇ. 38.9ರಷ್ಟು ಹೈನು ಉತ್ಪನಗಳ ಮಾದರಿಗಳೂ ಆಹಾರ ಸುರಕ್ಷತಾ ಪರೀಕ್ಷೆಯಲ್ಲಿ ವಿಫಲಗೊಂಡಿವೆ. ಇದರರ್ಥ, 1,478 ಹೈನುಗಾರಿಕಾ ಉತ್ಪನ್ನಗಳ ಸಂಗ್ರಹದ ಪೈಕಿ 575 ಮಾದರಿಗಳು ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸಿಲ್ಲ. ಈ ಪರೀಕ್ಷೆಯಲ್ಲಿ ವಿಫಲಗೊಂಡಿರುವ 575 ಮಾದರಿಗಳ ಪೈಕಿ 83 ಉತ್ಪನ್ನಗಳು ಬಾಹ್ಯ ಕೊಬ್ಬು ಹೊಂದಿರುವುದರಿಂದ ಅಥವಾ ಕಲಬೆರಕೆ ಆಗಿರುವುದರಿಂದ ಗುಣಮಟ್ಟ ಮಾನದಂಡದಲ್ಲಿ ವಿಫಲವಾಗಿವೆ. ಪನೀರ್ ನಲ್ಲಿ ಕೊಬ್ಬಿನ ಅಂಶ ಕಡಿಮೆ ಇದ್ದರೆ, ಹೆಚ್ಚು ತೇವಾಂಶ ಕಂಡು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪಂಜಾಬ್ ನ ಹೈನೋದ್ಯಮ ಅಭಿವೃದ್ಧಿ ಇಲಾಖೆಯ ಮಾಜಿ ನಿರ್ದೇಶಕ ಇಂದರ್ ಜಿತ್, ಬಾಹ್ಯ ಕೊಬ್ಬು ಹಾಲನ್ನು ಕಲಬೆರಕೆಗೊಳಿಸುತ್ತದೆ. ಬಾಹ್ಯ ಕೊಬ್ಬೆಂದರೆ, ಹಾಲಿನ ಮಾದರಿಯು ನೈಸರ್ಗಿಕ ಹಾಲಿನ ಕೊಬ್ಬನ್ನು ಹೊಂದಿಲ್ಲದಿರುವುದು. ಆದರೆ, ಸಂಸ್ಕರಿತ ತೈಲ, ಸಸ್ಯಜನ್ಯ ತೈಲ, ಪ್ರಾಣಿಜನ್ಯ ಕೊಬ್ಬು ಹಾಗೂ ಇನ್ನಿತರ ಕಲಬೆರಕೆಯಂಥ ಬಾಹ್ಯ ಕೊಬ್ಬುಗಳು ಹಾಲನ್ನು ಮನುಷ್ಯನ ಸೇವನೆಗೆ ಅಸುರಕ್ಷಿತಗೊಳಿಸುತ್ತವೆ” ಎನ್ನುತ್ತಾರೆ.
“ಪಂಜಾಬ್ ನಲ್ಲಿ ತಲಾವಾರು ಹಾಲು ಲಭ್ಯತೆ 1,170 ಗ್ರಾಂ ಹಾಗೂ ಹರ್ಯಾಣದಲ್ಲಿ 970 ಗ್ರಾಂ ಇದ್ದರೂ ಕಲಬೆರಕೆ ಮಾಡುವ ಕೆಲಸ ನಡೆಯುತ್ತಿದೆ” ಎಂದೂ ಅವರು ಆತಂಕ ವ್ಯಕ್ತಪಡಿಸುತ್ತಾರೆ.
ಎಪ್ರಿಲ್ 2023ರಿಂದ ಫೆಬ್ರವರಿ 2024ರ ನಡುವೆ ಸಂಗ್ರಹಿಸಲಾಗಿರುವ ಹಾಲಿನ ಮಾದರಿಗಳ ಪೈಕಿ, 99 ಮಾದರಿಗಳು ಆಹಾರ ಸುರಕ್ಷತಾ ಮಾನದಂಡವನ್ನು ಪಾಲಿಸಿಲ್ಲ. ಇವುಗಳ ಪೈಕಿ ಎರಡು ಮಾದರಿಗಳು ಮನುಷ್ಯನ ಸೇವನೆಗೆ ಅಸುರಕ್ಷಿತ ಎಂದು ಕಂಡು ಬಂದಿವೆ.
ಇದೇ ಅವಧಿಯಲ್ಲಿ ಶೇ. 30.26ರಷ್ಟು ಹೈನೋತ್ಪನ್ನಗಳ ಮಾದರಿಗಳು ಆಹಾರ ಸುರಕ್ಷತಾ ಪರೀಕ್ಷೆಯಲ್ಲಿ ವಿಫಲಗೊಂಡಿವೆ. ಇದರರ್ಥ, 1,249 ಹೈನೋತ್ಪನ್ನಗಳ ಮಾದರಿಗಳ ಪೈಕಿ 379 ಮಾದರಿಗಳು ಆಹಾರ ಸುರಕ್ಷತಾ ಮಾನದಂಡವನ್ನು ಪಾಲಿಸಿಲ್ಲ ಹಾಗೂ ಈ ಪೈಕಿ 79 ಮಾದರಿಗಳು ಮನುಷ್ಯನ ಸೇವನೆಗೆ ಅಸುರಕ್ಷಿತ ಎಂದು ಕಂಡು ಬಂದಿವೆ. ಈ ಮಾದರಿಗಳು ಕಲಬೆರಕೆಗೊಂಡಿದ್ದವು ಎಂದು ಪಂಜಾಬ್ ಆಹಾರ ಸುರಕ್ಷತಾ ಘಟಕದ ಅಧಿಕಾರಿಯೊಬ್ಬರು ಹೇಳುತ್ತಾರೆ.
“ಈ ಮಾದರಿಗಳಲ್ಲಿ ಕೇವಲ ಅಶುದ್ಧ ಹಾಲು ಮಾತ್ರ ಇರಲಿಲ್ಲ; ಬದಲಿಗೆ ಹಾಲನ್ನು ಕಲಬೆರಕೆಗೊಳಿಸುವ ಅಪಾಯಕಾರಿ ರಾಸಾಯನಿಕಗಳೂ ಮಿಶ್ರಣಗೊಂಡಿದ್ದವು. ಇದರಿಂದ ಈ ಹಾಲು ಮನುಷ್ಯನ ಸೇವನೆಗೆ ಅಸುರಕ್ಷಿತವಾಗಿ ಬದಲಾಗಿತ್ತು. ಈ ಪೈಕಿ ಕೆಲವು ಹಾಲುಗಳಲ್ಲಿ ನೀರಿತ್ತು ಹಾಗೂ ಇನ್ನೂ ಕೆಲವು ಹಾಲುಗಳಲ್ಲಿ ಕಡಿಮೆ ಕೊಬ್ಬು ಕೂಡಾ ಇತ್ತು” ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.
“ಖೋವಾ ಹಾಗೂ ಪನೀರ್ ನಂತಹ ಹೈನೋತ್ಪನ್ನಗಳಲ್ಲಿ ಸಂಸ್ಕರಿತ ತೈಲ, ಮಾರ್ಜಕ, ಯೂರಿಯಾ ಹಾಗೂ ಕೆಲವು ಆಮ್ಲಗಳನ್ನು ಹೊಂದಿದ್ದವು. ಇನ್ನೂ ಕೆಲವು ಮಾದರಿಗಳಲ್ಲಿ, ಸಿಹಿ ಸ್ವಾದವನ್ನು ನೀಡಲು ಗ್ಲುಕೋಸ್ ಅನ್ನು ಸೇರ್ಪಡೆ ಮಾಡಲಾಗಿತ್ತು. ಕಳೆದ ವರ್ಷ, ಹಾಲು, ಪನೀರ್ ಹಾಗೂ ಖೋವಾ ಮಾದರಿಗಳಲ್ಲಿ ಮಾರ್ಜಕ ಬೆರೆಸುತ್ತಿದ್ದ ಜಾಲವೊಂದನ್ನು ಪಂಜಾಬ್ ನಲ್ಲಿ ಭೇದಿಸಲಾಗಿತ್ತು. ನಂತರ ಸರಕಾರವು ಇಂತಹ ಪ್ರಕರಣಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿತ್ತು” ಎಂದು ಅಧಿಕಾರಿಗಳು ಹೇಳುತ್ತಾರೆ.
“ಕಲಬೆರೆಕೆ ಹಾಲು ಹಾಗೂ ಅದರ ಉತ್ಪನ್ನಗಳ ಮನುಷ್ಯರಿಗೆ ಅಪಾಯಕಾರಿ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸರಕಾರ ಹಲವಾರು ಅಭಿಯಾನಗಳನ್ನು ನಡೆಸಿದ್ದು, ಗುಣಮಟ್ಟದ ಕುರಿತು ಖರಾರ್ ಆಹಾರ ಸುರಕ್ಷತಾ ಪ್ರಯೋಗಾಲಯದಲ್ಲಿ ಪರೀಕ್ಷಿಸಿಕೊಳ್ಳಿ ಎಂದು ಸಲಹೆ ನೀಡಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಲೂಧಿಯಾನದಲ್ಲಿರುವ ಹೈನೋತ್ಪನ್ನ ವಿಜ್ಞಾನ ಹಾಗೂ ತಂತ್ರಜ್ಞಾನ ಕಾಲೇಜಾದ ಗುರು ಅಂಗದ್ ದೇವ್ ಪಶುವೈದ್ಯಕೀಯ ಹಾಗೂ ಪಶು ವಿಜ್ಞಾನ ವಿಶ್ವವಿದ್ಯಾಲಯದ ಡೀನ್ ಆಗಿರುವ ಡಾ. ಆರ್.ಎಸ್.ಸೇಥಿ ಪ್ರಕಾರ, “ಅಸುರಕ್ಷಿತ ಹಾಲು ಕಳವಳಕಾರಿಯಾಗಿದೆ. ಕೆಲ ತಿಂಗಳ ಹಿಂದೆ ನಮ್ಮ ಕಾಲೇಜು ಲೂಧಿಯಾನದಲ್ಲಿ ಜಾಗೃತಿ ಶಿಬಿರವನ್ನು ಏರ್ಪಡಿಸಿತ್ತು ಹಾಗೂ ತಮ್ಮ ಹಾಲು ಮಾದರಿಗಳನ್ನು ಪರೀಕ್ಷಿಸಿಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸಲಾಯಿತು. ಗಮಹಾರ್ಹ ಸಂಖ್ಯೆಯ ಹಾಲು ಮಾದರಿಗಳು ಪರೀಕ್ಷೆಯಲ್ಲಿ ವಿಫಲಗೊಂಡವು ಹಾಗೂ ನಾವು ಆ ಹಾಲಿನ ಮಾದರಿಗಳಲ್ಲಿ ರಾಸಾಯಿನಿಕಗಳು ಹಾಗೂ ಕಲ್ಮಶಗಳು ಇರುವುದಾಗಿ ಅವರಿಗೆ ತಿಳಿಸಿದೆವು” ಎಂದು ಹೇಳುತ್ತಾರೆ.
“ಜಾಗೃತಿ ಮೂಡಿಸುವುದು ಅತ್ಯಂತ ಮುಖ್ಯ. ಮನುಷ್ಯನ ಸೇವನೆಗೆ ಸುರಕ್ಷಿತವಾಗಿರುವ ಹಾಲನ್ನು ನಾವು ಸೇವಿಸುತ್ತಿದ್ದೇವೆ ಎಂದು ಖಾತರಿಪಡಿಸಿಕೊಳ್ಳಲು ಹಾಲಿನ ಮಾದರಿಗಳನ್ನು ಜನರು ಪರೀಕ್ಷಿಸಿಕೊಳ್ಳಬೇಕು. GADVASU ಹಾಲನ್ನು ಸ್ವಗೃಹದಲ್ಲೇ ಪರೀಕ್ಷಿಸಿಕೊಳ್ಳಬಲ್ಲ ಕಿಟ್ ಒಂದನ್ನು ಅಭಿವೃದ್ಧಿ ಪಡಿಸಿದೆ. ಈ ಕಿಟ್ ಗಳು ವಿಶ್ವವಿದ್ಯಾಲಯದಲ್ಲಿ ಅಗ್ಗದ ದರದಲ್ಲಿ ದೊರೆಯುತ್ತವೆ ಹಾಗೂ ಬಳಸಲು ಸುಲಭವಾಗಿವೆ” ಎಂದೂ ಅವರು ಹೇಳುತ್ತಾರೆ.
ಇತ್ತೀಚೆಗೆ ಮೊಹಾಲಿಯಲ್ಲಿನ ವೆರ್ಕಾ ಹಾಲು ಘಟಕಕ್ಕೆ ಕಲಬೆರಕೆ ಹಾಲನ್ನು ಸರಬರಾಜು ಮಾಡಿರುವ ಪ್ರಕರಣವೊಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಎದುರು ವಿಚಾರಣೆಗೆ ಬಂದಿತ್ತು. ಜುಲೈ 14, 2015ರಂದು ದಾಖಲಾಗಿರುವ ಪ್ರಾಥಮಿಕ ಮಾಹಿತಿ ವರದಿಯ ಪ್ರಕಾರ, ಮೊಹಾಲಿಯಲ್ಲಿರುವ ವೆರ್ಕಾ ಹಾಲು ಘಟಕಕ್ಕೆ ಕಲಬೆರಕೆ ಹಾಲನ್ನು ಸರಬರಾಜು ಮಾಡಲಾಗಿತ್ತು ಹಾಗೂ ಸಾರ್ವಜನಿಕರಿಗೆ ಪೂರೈಸಲಾದ ಹಾಲಿನಲ್ಲಿ ರಾಸಾಯನಿಕಗಳನ್ನು ಬೆರೆಸಲಾಗಿತ್ತು ಎಂದು ಆರೋಪಿಸಲಾಗಿದೆ.
ಸೌಜನ್ಯ: indianexpress.com