ಇಸ್ರೇಲ್‌ಗೆ ಪೇಜರ್‌ನಿಂದ ಕೊಲ್ಲಲು ಸಾಧ್ಯವಾದರೆ, ಇವಿಎಮ್ ಕತೆ ಏನು? : ಕಾಂಗ್ರೆಸ್ ಪ್ರಶ್ನೆ

Update: 2024-10-15 14:59 GMT

ಚುನಾವಣಾ ಆಯೋಗ | PC : PTI 

ಹೊಸದಿಲ್ಲಿ : ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಹೊರಬಿದ್ದಿರುವಂತೆಯೇ, ಈ ಚುನಾವಣೆಗಳನ್ನು ಮತಪತ್ರಗಳ ಮೂಲಕ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಮಂಗಳವಾರ ಒತ್ತಾಯಿಸಿದ್ದಾರೆ. ಚುನಾವಣೆಗಳಲ್ಲಿ ಇಲೆಕ್ಟ್ರಾನಿಕ್ ಮತ ಯಂತ್ರ (ಇವಿಎಮ್)ಗಳನ್ನು ಬಳಸಿದರೆ ಬಿಜೆಪಿ ಸರಕಾರ ಮತ್ತು ಚುನಾವಣಾ ಆಯೋಗ ‘‘ಏನು ಬೇಕಾದರೂ ಮಾಡಬಹುದು’’ ಎಂದು ಅವರು ಹೇಳಿದ್ದಾರೆ.

ಜನರ ಪೇಜರ್‌ಗಳಲ್ಲೇ ಹಸ್ತಕ್ಷೇಪ ನಡೆಸಿ ಅವರನ್ನು ಕೊಲ್ಲಲು ಇಸ್ರೇಲ್‌ಗೆ ಸಾಧ್ಯವಾದರೆ, ಏನು ಬೇಕಾದರೂ ಆಗಬಹುದು ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ನೊಂದಿಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದಾರೆ ಎಂಬುದಾಗಿಯೂ ಅವರು ಹೇಳಿದರು.

‘‘ಮಹಾರಾಷ್ಟ್ರದಲ್ಲಿ, ಚುನಾವಣೆಯನ್ನು ಇಲೆಕ್ಟ್ರಾನಿಕ್ ಮತಯಂತ್ರದ ಮೂಲಕ ಮಾಡದೆ ಮತಪತ್ರದಲ್ಲೇ ನಡೆಸಬೇಕು ಎಂಬುದಾಗಿ ಪ್ರತಿಪಕ್ಷಗಳು ಒತ್ತಡ ಹೇರಬೇಕು. ಇಲ್ಲದಿದ್ದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಮತ್ತು ಚುನಾವಣಾ ಆಯೋಗ ಏನು ಬೇಕಾದರೂ ಮಾಡಬಹುದು. ಜನರ ಪೇಜರ್‌ಗಳು ಮತ್ತು ವಾಕಿಟಾಕಿಗಳನ್ನು ಬಳಸಿಕೊಂಡು ಅವರನ್ನು ಕೊಲ್ಲಲು ಇಸ್ರೇಲ್‌ಗೆ ಸಾಧ್ಯವಾದರೆ, ಇಲೆಕ್ಟ್ರಾನಿಕ್ ಮತಯಂತ್ರದ ಕತೆ ಏನು? ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ನೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದ್ದಾರೆ. ಇಂಥ ವಿಷಯಗಳಲ್ಲಿ ಇಸ್ರೇಲ್ ಪರಿಣತಿಯನ್ನು ಹೊಂದಿದೆ’’ ಎಂದು ಎಎನ್‌ಐ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಹೇಳಿದರು.

‘‘ಇವಿಎಮ್‌ನ ದೊಡ್ಡ ಆಟ ಎಲ್ಲಿ ಬೇಕಾದರೂ ನಡೆಯಬಹುದು. ಹಾಗಾಗಿ, ಚುನಾವಣೆಗೆ ಮುನ್ನ ಬಿಜೆಪಿಯು ಈ ಆಟವನ್ನು ಆಡುತ್ತಿದೆ’’ ಎಂದರು.

► ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆ : ಜೆಎಮ್‌ಎಮ್

ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯಾಚರಿಸುತ್ತಿಲ್ಲ, ಅದು ಬಿಜೆಪಿಯಿಂದ ಒತ್ತಡವನ್ನು ಎದುರಿಸುತ್ತಿದೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚ (ಜೆಎಮ್‌ಎಮ್) ಆರೋಪಿಸಿದೆ.

‘‘ಚುನಾವಣಾ ವೇಳಾಪಟ್ಟಿಯನ್ನು ಇಂದು ಘೋಷಿಸಲಾಗಿದೆ. ಆದರೆ, ಬಿಜೆಪಿ ನಾಯಕರಿಗೆ ಅದರ ಮಾಹಿತಿ ನಿನ್ನೆಯೇ ಸಿಕ್ಕಿದೆ. ಇದು ಅತ್ಯಂತ ಗಂಭೀರ ವಿಷಯ. ಬಿಜೆಪಿ ನಾಯಕರ ಆಣತಿಯಂತೆ ಚುನಾವಣಾ ಆಯೋಗವು ಕೆಲಸ ಮಾಡುತ್ತಿದೆಯೇ? ಆಯೋಗವನ್ನು ಕೈಗೊಂಬೆಯಂತೆ ಮಾಡುತ್ತಿರುವುದು ಗಂಭೀರ ವಿಷಯವಾಗಿದೆ’’ ಜೆಎಮ್‌ಎಮ್ ನಾಯಕ ಮನೋಜ್ ಪಾಂಡೆ ಹೇಳಿದರು.

‘‘ಧಣಿ ಎಲ್ಲವನ್ನೂ ನಿರ್ಧರಿಸಿದ್ದಾರೆ. ಎಂಥ ಸನ್ನಿವೇಶವಿದು! ಚುನಾವಣಾ ಆಯೋಗವೇ, ನಿಮಗೆ ಏನಾದರೂ ಹೇಳಲಿಕ್ಕಿದೆಯೇ?’’ ಎಂಬುದಾಗಿ ಜಾರ್ಖಂಡ್ ಮುಕ್ತಿ ಮೋರ್ಚ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News