ಇಸ್ರೇಲ್- ಹಮಾಸ್ ಸಂಘರ್ಷ: ಮಾತುಕತೆ ಮೂಲಕ ಶಾಂತಿಯುತ ಪರಿಹಾರಕ್ಕೆ ಮೋದಿ ಕರೆ
ಹೊಸದಿಲ್ಲಿ: ಇಸ್ರೇಲ್-ಹಮಾಸ್ ಸಂಘರ್ಷದಲ್ಲಿನ ನೂತನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ದೂರವಾಣಿ ಮೂಲಕ ಚರ್ಚಿಸಿದರು. ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲಿನ ದಾಳಿಯನ್ನು ಹೌದಿ ಬಂಡುಕೋರರು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಪ್ರದೇಶದಲ್ಲಿನ ನೌಕಾಯಾನ ಸುರಕ್ಷತೆಯ ಬಗ್ಗೆಯೂ ಅವರು ಆತಂಕವನ್ನು ವ್ಯಕ್ತಪಡಿಸಿದರು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ದೂರವಾಣಿ ಮಾತುಕತೆ ನಡಸಿದ ಅವರು ‘ರಾಜತಾಂತ್ರಿಕತೆ ಹಾಗೂ ಸಂಧಾನ’ದ ಮೂಲಕ ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ತ್ವರಿತ ಹಾಗೂ ಶಾಂತಿಯುತ ಪರಿಹಾರ, ಯುದ್ಧದಿಂದ ಸಂತ್ರಸ್ತರಾದವರಿಗೆ ನಿರಂತರವಾಗಿ ಮಾನವೀಯ ನೆರವು ಒದಗಿಸುವ ಅಗತ್ಯವನ್ನು ಮೋದಿ ಮಾತುಕತೆಯ ವೇಳೆ ಪ್ರಸ್ತಾವಿಸಿದರು.
ಭಾರತದಿಂದ ಇಸ್ರೇಲ್ ಗೆ ಉದ್ಯೋಗಿಗಳ ಆಗಮನವನ್ನು ತ್ವರಿತಗೊಳಿಸುವ ಬಗ್ಗೆಯೂ ಉಭಯ ನಾಯಕರು ಚರ್ಚಿಸಿರುವುದಾಗಿ ಇಸ್ರೇಲ್ ನ ಹೇಳಿಕೆಯೊಂದು ತಿಳಿಸಿದೆ.
‘‘ ಇರಾನಿನ ಕುಮ್ಮಕ್ಕಿನೊಂದಿಗೆ ಹೌದಿಗಳು ನಡೆಸುತ್ತಿರುವ ಆಕ್ರಮಣದಿಂದಾಗಿ ತತ್ತರಿಸಿರುವ ಬಾಬ್ ಅಲ್ ಮಾಂದೇಬ್ ನಲ್ಲಿ ಸುರಕ್ಷಿತ ನೌಕಾಯಾನದ ಸ್ವಾತಂತ್ರ್ಯವನ್ನು ಕಾಪಾಡುವ ಬಗ್ಗೆ ಹಾಗೂ ಜಾಗತಿಕ ಹಿತಾದೃಷ್ಟಿಯಿಂದ ಆರ್ಥಿಕತೆ ಹಾಗೂ ವ್ಯಾಪಾರದ ಮೇಲಿನ ದಾಳಿಗಳನ್ನು ತಡೆಗಟ್ಟುವ ಅಗತ್ಯದ ಬಗ್ಗೆ ಉಭಯ ನಾಯಕರು ಚರ್ಚಿಸಿದರು’’ ಎಂದು ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.