ಆಂತರಿಕ ನಿರ್ಧಾರಗಳನ್ನು ರಾಜಕೀಯ ಪಕ್ಷಗಳು ಹೊರಗೆಡಹುವುದು ಕಷ್ಟ: ಸಿಜೆಐ ಚಂದ್ರಚೂಡ್

Update: 2023-07-26 15:36 GMT

Photo: ಡಿ.ವೈ. ಚಂದ್ರಚೂಡ್ | PTI 

ಹೊಸದಿಲ್ಲಿ, ಜು. 26: ಮಾಹಿತಿ ಹಕ್ಕು ಕಾಯ್ದೆ (RTI)ಯಡಿ ತಮ್ಮ ಆಂತರಿಕ ನಿರ್ಧಾರಗಳನ್ನು ಬಹಿರಂಗಗೊಳಿಸುವ ವಿಷಯದಲ್ಲಿ ರಾಜಕೀಯ ಪಕ್ಷಗಳು ಹೊಂದಿರುವ ಕಳವಳಗಳು ಸಹಜವಾಗಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಮಂಗಳವಾರ ಹೇಳಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳನ್ನು ಸಾರ್ವಜನಿಕ ಸಂಸ್ಥೆಗಳು ಎಂಬುದಾಗಿ ಘೋಷಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು. ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳನ್ನು ಈ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.

ಮಂಗಳವಾರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ರಾಜಕೀಯ ಪಕ್ಷಗಳು ಆರ್ಥಿಕ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಬೇಡಿಕೆಗೆ ತನ್ನ ಬೆಂಬಲವಿದೆ ಎಂದು ಹೇಳಿತು. ಆದರೆ, ಯಾವ ಅಭ್ಯರ್ಥಿಯನ್ನು ಯಾವ ಕಾರಣಕ್ಕಾಗಿ ಆರಿಸಲಾಯಿತು ಅಥವಾ ಪಕ್ಷದೊಳಗೆ ಯಾವ ವಿಷಯದ ಬಗ್ಗೆ ಚರ್ಚಿಸಲಾಯಿತು ಮುಂತಾದ ಗುಪ್ತ ಮಾಹಿತಿಗಳನ್ನು ಬಹಿರಂಗಪಡಿಸುವಂತೆ ಬಲವಂತಪಡಿಸುವುದಕ್ಕೆ ತನ್ನ ವಿರೋಧವಿದೆ ಎಂದು ಹೇಳಿತು.

‘‘ಅವರು ಹೇಳುವುದರಲ್ಲೂ ಅರ್ಥವಿದೆ’’ ಎಂದು ಆಗ ನ್ಯಾ. ಚಂದ್ರಚೂಡ್ ಹೇಳಿದರು. ‘‘ನಮ್ಮ ಅಭ್ಯರ್ಥಿಗಳನ್ನು ನಾವು ಹೇಗೆ ಆರಿಸುತ್ತೇವೆ ಎನ್ನುವುದನ್ನು ಬಹಿರಂಗಪಡಿಸುವಂತೆ ನಮ್ಮ ಮೇಲೆ ಒತ್ತಡ ಹೇರಬೇಡಿ ಎಂದು ಅವರು ಹೇಳುತ್ತಿದ್ದಾರೆ. ಹೀಗೆ ಒತ್ತಡ ಹೇರುವುದು ಸರಿಯಲ್ಲ ಎಂದು ನನಗೂ ಅನಿಸುತ್ತದೆ’’ ಎಂದರು.

ಆಗ, ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಪ್ರಶಾಂತ್ ಭೂಷಣ್, ಕೇಂದ್ರೀಯ ಮಾಹಿತಿ ಆಯೋಗದ 2013ರ ತೀರ್ಪನ್ನು ಉಲ್ಲೇಖಿಸಿದರು. ಆ ತೀರ್ಪು, ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳನ್ನು ಸಾರ್ವಜನಿಕ ಸಂಸ್ಥೆಗಳು ಎಂಬುದಾಗಿ ಘೋಷಿಸಿತ್ತು. ಕೇಂದ್ರೀಯ ಮಾಹಿತಿ ಆಯೋಗವು, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅತ್ಯುನ್ನತ ಮೇಲ್ಮನವಿ ಪ್ರಾಧಿಕಾರವಾಗಿದೆ.

ರಾಜಕೀಯ ಪಕ್ಷಗಳು ಸರಕಾರದಿಂದ ಗಣನೀಯ ಪ್ರಮಾಣದಲ್ಲಿ ನಿಧಿಗಳು ಮತ್ತು ವಿವಿಧ ಸವಲತ್ತುಗಳನ್ನು ಪಡೆಯುತ್ತವೆ ಹಾಗೂ ಅವುಗಳು ಸರಕಾರದ ವ್ಯವಹಾರಗಳಲ್ಲಿ ಮಹತ್ವದ ಪಾತ್ರಗಳನ್ನು ವಹಿಸುತ್ತವೆ ಎಂದು ಭೂಷಣ್ ಹೇಳಿದರು. ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷಗಳ ನೋಂದಣಿಯಾಗುತ್ತದೆ. ಚುನಾವಣಾ ಆಯೋಗವು ಸಾರ್ವಜನಿಕ ಸಂಸ್ಥೆಯಾಗಿದೆ. ಹಾಗಾಗಿ, ಮಾಹಿತಿ ಹಕ್ಕು ಕಾಯ್ದೆಯಡಿ ರಾಜಕೀಯ ಪಕ್ಷಗಳು ಉತ್ತತದಾಯಿತ್ವ ಹೊಂದಿವೆ ಎಂದು ಅವರು ವಾದಿಸಿದರು.

ಮುಂದಿನ ವಿಚಾರಣೆ ಆಗಸ್ಟ್ 1ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News