ಜಮ್ಮು-ಕಾಶ್ಮೀರ ಚುನಾವಣೆಗಳು 2024 | ಕಾಂಗ್ರೆಸ್‌ನಿಂದ ಮಹಿಳೆಯರಿಗೆ 3,000 ರೂ. ಸೇರಿದಂತೆ 5 ಗ್ಯಾರಂಟಿಗಳ ಘೋಷಣೆ
ಶ್ರೀನಗರ : ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಾಗಿ ಪ್ರಚಾರ ಬಿರುಸು ಪಡೆದುಕೊಂಡಿದ್ದು, ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳ ಭರವಸೆಯನ್ನು ಜನತೆಗೆ ನೀಡಿದರು.
ಅನಂತನಾಗ್‌ನಲ್ಲಿ ಮಾತನಾಡುತ್ತಿದ್ದ ಖರ್ಗೆ ಕುಟುಂಬದ ಯಜಮಾನಿಗೆ ಮಾಸಿಕ 3,000 ರೂ.ಪಾವತಿ ಮತ್ತು ಪ್ರತಿ ವ್ಯಕ್ತಿಗೆ 11 ಕೆ.ಜಿ.ಪಡಿತರ ವಿತರಣೆಯ ಮರುಸ್ಥಾಪನೆ, ಮಹಿಳಾ ಉದ್ಯಮಿಗಳಿಗೆ ಐದು ಲಕ್ಷ ರೂ.ಗಳ ಬಡ್ಡಿರಹಿತ ಸಾಲ ಮತ್ತು ಪ್ರತಿ ಕುಟುಂಬಕ್ಕೆ 25 ಲಕ್ಷ ರೂ.ಗಳ ಆರೋಗ್ಯ ವಿಮೆಯ ಭರವಸೆಗಳನ್ನು ನೀಡಿದರು.
ಮನಮೋಹನ ಸಿಂಗ್ ಅಧಿಕಾರಾವಧಿಯಲ್ಲಿ ನೀಡಲಾಗಿದ್ದ ಕಾಶ್ಮೀರಿ ಪಂಡಿತರ ಪುನರ್ವಸತಿ ಭರವಸೆಯನ್ನು ಕಾಂಗ್ರೆಸ್-ಎನ್‌ಸಿ ಸರಕಾರವು ಈಡೇರಿಸಲಿದೆ ಎಂದ ಅವರು, ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಸಾಂವಿಧಾನಿಕ ಹಕ್ಕುಗಳ ಭರವಸೆಯನ್ನೂ ನೀಡಿದರು.
ಪ್ರದೇಶದಲ್ಲಿ ಒಂದು ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವೈಫಲ್ಯ ಮತ್ತು ಕೈಗಾರಿಕೆಯ ಮೂಲಕ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸದ್ದಕಾಗಿ ಬಿಜೆಪಿಯನ್ನು ಖರ್ಗೆ ತನ್ನ ಭಾಷಣದಲ್ಲಿ ಟೀಕಿಸಿದರು.
ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮತ್ತು ದ್ವಿಸದನ ಶಾಸಕಾಂಗದ ಮರುಸ್ಥಾಪನೆಗೆ ಪಕ್ಷದ ಬದ್ಧತೆಯನ್ನೂ ಖರ್ಗೆ ಪುನರುಚ್ಚರಿಸಿದರು. ಜಮ್ಮು-ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅ.8ರಂದು ಮತಗಳ ಎಣಿಕೆ ನಡೆಯಲಿದೆ.