ಜನ ವಿಶ್ವಾಸ್ ಮಸೂದೆಯಿಂದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಹೊರೆ ಇಳಿಕೆ : ಪ್ರಧಾನಿ ಮೋದಿ
ಹೊಸದಿಲ್ಲಿ: ಸಶಕ್ತ ನ್ಯಾಯಾಂಗ ವ್ಯವಸ್ಥೆಯು ವಿಕಸಿತ ಭಾರತದ ಭಾಗವಾಗಿದೆ. ವಿಶ್ವಾಸಾರ್ಹ ನ್ಯಾಯಾಂಗ ವ್ಯವಸ್ಥೆಯನ್ನು ರೂಪಿಸಲು ಸರಕಾರವು ನಿರಂತರವಾಗಿ ಶ್ರಮಿಸುತ್ತಿದೆ ಮತ್ತು ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಜನ ವಿಶ್ವಾಸ್ ಮಸೂದೆ ಈ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ಇದು ಭವಿಷ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಅನಗತ್ಯ ಹೊರೆಯನ್ನು ತಗ್ಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಇಲ್ಲಿ ಹೇಳಿದರು.
ಸರ್ವೋಚ್ಚ ನ್ಯಾಯಾಲಯದ 75ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಸರಕಾರವು ಪ್ರಸ್ತುತ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಮತ್ತು ಅತ್ಯುತ್ತಮ ಪದ್ಧತಿಗಳಿಗೆ ಅನುಗುಣವಾಗಿ ಕಾನೂನುಗಳನ್ನು ಆಧುನೀಕರಿಸುತ್ತಿದೆ. ಮೂರು ಹೊಸ ಕ್ರಿಮಿನಲ್ ನ್ಯಾಯ ಕಾನೂನುಗಳನ್ನು ಜಾರಿಗೊಳಿಸುವುದರೊಂದಿಗೆ ಭಾರತದ ಕಾನೂನು, ಪೊಲೀಸ್ ಮತ್ತು ತನಿಖಾ ವ್ಯವಸ್ಥೆಗಳು ಹೊಸ ಯುಗವನ್ನು ಪ್ರವೇಶಿಸಿವೆ ಎಂದು ಹೇಳಿದರು.
‘ನೂರಾರು ವರ್ಷಗಳಷ್ಟು ಹಳೆಯ ಕಾನೂನುಗಳಿಂದ ಹೊಸ ಕಾನೂನುಗಳಿಗೆ ಪರಿವರ್ತನೆಯು ಸುಗಮವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಸರಕಾರಿ ಉದ್ಯೋಗಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ ಕಾರ್ಯವನ್ನು ಈಗಾಗಲೇ ಆರಂಭಿಸಿದ್ದೇವೆ ’ಎಂದು ಹೇಳಿದ ಮೋದಿ,ಸಂಬಂಧಿಸಿದ ಇತರರ ಸಾಮರ್ಥ್ಯ ನಿರ್ಮಾಣಕ್ಕೆ ಮುಂದಾಗುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದರು.
ಸರ್ವೋಚ್ಚ ನ್ಯಾಯಾಲಯವು ಭಾರತದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸಿದೆ. ವೈಯಕ್ತಿಕ ಹಕ್ಕುಗಳು ಮತ್ತು ವಾಕ್ಸ್ವಾತಂತ್ರ್ಯದ ಕುರಿತು ಅದರ ಹಲವಾರು ಮಹತ್ವದ ತೀರ್ಪುಗಳು ದೇಶದ ಸಾಮಾಜಿಕ-ರಾಜಕೀಯ ಪರಿಸರಕ್ಕೆ ಹೊಸ ದಿಕ್ಕನ್ನು ನೀಡಿವೆ. ಭಾರತದ ಇಂದಿನ ಆರ್ಥಿಕ ನೀತಿಗಳು ನಾಳೆಯ ಉಜ್ವಲ ಭಾರತದ ಬುನಾದಿಯನ್ನು ರೂಪಿಸುತ್ತವೆ. ಇಂದು ಭಾರತದಲ್ಲಿ ತರಲಾಗುತ್ತಿರುವ ಕಾನೂನುಗಳು ನಾಳೆಯ ಉಜ್ವಲ ಭಾರತವನ್ನು ಇನ್ನಷ್ಟು ಬಲಗೊಳಿಸಲಿವೆ ಎಂದು ಮೋದಿ ನುಡಿದರು.
‘ಇಂದು ಮಾಡಲಾದ ಕಾನೂನುಗಳು ಭಾರತದ ಭವಿಷ್ಯವನ್ನು ಉಜ್ವಲಗೊಳಿಸಲಿವೆ. ಜಾಗತಿಕವಾಗಿ ಆಗುತ್ತಿರುವ ಬದಲಾವಣೆಗಳೊಂದಿಗೆ ವಿಶ್ವದ ಕಣ್ಣುಗಳು ಭಾರತದ ಮೇಲೆ ನೆಟ್ಟಿವೆ. ಭಾರತದಲ್ಲಿ ಪ್ರಪಂಚದ ನಂಬಿಕೆಯು ಹೆಚ್ಚುತ್ತಿದೆ. ನಮಗೆ ನೀಡಲಾಗಿರುವ ಪ್ರತಿಯೊಂದೂ ಅವಕಾಶವನ್ನು ಬಳಸಿಕೊಳ್ಳುವುದು ಭಾರತಕ್ಕೆ ಮುಖ್ಯವಾಗಿದೆ ’ ಎಂದರು.
800 ಕೋ.ರೂ.ಗಳ ವೆಚ್ಚದಲ್ಲಿ ಸರ್ವೋಚ್ಚ ನ್ಯಾಯಾಲಯದ ಕಟ್ಟಡ ವಿಸ್ತರಣೆ ಯೋಜನೆಯನ್ನು ಸರಕಾರವು ಕಳೆದ ವಾರ ಅನುಮೋದಿಸಿದೆ ಎಂದೂ ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದರು.