ಬಿಜೆಪಿ ಶಾಸಕರ ಕುದುರೆ ವ್ಯಾಪಾರ ನಡೆಸುತ್ತಿದೆ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಆರೋಪ
ಗೊಡ್ಡ: ಜೆಎಂಎಂ ನಾಯಕ ಚಂಪೈ ಸೊರೇನ್ ಬಿಜೆಪಿ ಸೇರ್ಪಡೆಯಾಗಬಹುದು ಎಂಬ ವದಂತಿಗಳ ಬೆನ್ನಿಗೇ, ಬಿಜೆಪಿಯು ಶಾಸಕರ ಕುದುರೆ ವ್ಯಾಪಾರ ನಡೆಸುತ್ತಿದೆ ಹಾಗೂ ಸಮಾಜವನ್ನು ವಿಭಜಿಸುತ್ತಿದೆ ಎಂದು ರವಿವಾರ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಆರೋಪಿಸಿದ್ದಾರೆ.
ಜೆಎಂಎಂ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ದಿಲ್ಲಿಯನ್ನು ತಲುಪಿದ ಕೆಲವೇ ಗಂಟೆಗಳ ನಂತರ ಹೇಮಂತ್ ಸೊರೇನ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಜಾರ್ಖಂಡ್ ನ ಗೊಡ್ಡ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸರಕಾರಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಹೇಮಂತ್ ಸೊರೇನ್, ಬಿಜೆಪಿಯು ಗುಜರಾತ್, ಅಸ್ಸಾಂ ಹಾಗೂ ಮಹಾರಾಷ್ಟ್ರದಿಂದ ಜನರನ್ನು ಕರೆ ತಂದು ಆದಿವಾಸಿಗಳು, ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ನಡುವೆ ವಿಷ ಹರಡಿ, ಅವರು ಪರಸ್ಪರ ಕಚ್ಚಾಡುವಂತೆ ಮಾಡುತ್ತಿದೆ” ಎಂದು ಆರೋಪಿಸಿದರು.
“ಸಮಾಜವನ್ನು ಮರೆತು ಬಿಡಿ; ಈ ಜನರು ಕುಟುಂಬ ಹಾಗೂ ಪಕ್ಷಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರು ಶಾಸಕರನ್ನು ಖರೀದಿಸುತ್ತಾರೆ. ದುಡ್ಡು ಹೇಗೆಂದರೆ, ರಾಜಕಾರಣಿಗಳು ಇತ್ತಲಿಂದ ಅತ್ತ, ಅತ್ತಲಿಂದ ಇತ್ತ ಓಡಾಡಲು ಹೆಚ್ಚು ಸಮಯ ಹಿಡಿಯುವುದಿಲ್ಲ” ಎಂದು ಅವರು ಹೇಳಿದರು.
ಗಮನಾರ್ಹ ಸಂಗತಿಯೆಂದರೆ, ತಾನು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂಬ ವದಂತಿಗಳು ಹರಡಿರುವ ಬೆನ್ನಿಗೇ, ರವಿವಾರ ಚಂಪೈ ಸೊರೇನ್ ದಿಲ್ಲಿಗೆ ಆಗಮಿಸಿದ್ದಾರೆ. ಅವರು ಕೋಲ್ಕತ್ತಾದಿಂದ ದಿಲ್ಲಿಗೆ ನಿರ್ಗಮಿಸಿದರು ಎಂದು ಚಂಪೈ ಸೊರೇನ್ ಅವರ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.