JNU ಪ್ರವೇಶ ಪರೀಕ್ಷೆ | ಹಳೆಯ ವ್ಯವಸ್ಥೆಗೆ ಮರಳಲು ವಿವಿ ಒಪ್ಪಿಗೆ: ವಿದ್ಯಾರ್ಥಿ ಒಕ್ಕೂಟ
ಹೊಸದಿಲ್ಲಿ : ಕಳೆದ 15 ದಿನಗಳಿಂದ ಹಲವಾರು ಬೇಡಿಕೆಗಳಿಗೆ ಸಂಬಂಧಿಸಿದಂತೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜೆಎನ್‌ಯು ಆಡಳಿತ ಮತ್ತು ವಿದ್ಯಾರ್ಥಿಗಳ ಒಕ್ಕೂಟದ ನಡುವೆ ನಡೆಯುತ್ತಿರುವ ಜಟಿಲತೆ ಶೀಘ್ರವೇ ಅಂತ್ಯಗೊಳ್ಳಲಿದ್ದು, ಹಲವು ಬೇಡಿಕೆಗಳ ಕುರಿತು ಒಮ್ಮತಕ್ಕೆ ಬಂದಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ 12 ಪ್ರಮುಖ ಬೇಡಿಕೆಗಳ ಪೈಕಿ ಕನಿಷ್ಠ ಆರನ್ನಾದರೂ ಈಡೇರಿಸಲು ವಿಶ್ವವಿದ್ಯಾಲಯ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.
JNUSU ವಿದ್ಯಾರ್ಥಿ ಒಕ್ಕೂಟದ ಪ್ರಕಾರ, ವಿವಿಯು ಹಳೆಯ ಆಂತರಿಕ ಪ್ರವೇಶ ಪರೀಕ್ಷೆಯ ವ್ಯವಸ್ಥೆಯನ್ನು ಮರುಸ್ಥಾಪಿಸುವುದು ಸೇರಿದಂತೆ ಅವರ ಕೆಲವು ಬೇಡಿಕೆಗಳಿಗೆ ಮೌಖಿಕವಾಗಿ ಒಪ್ಪಿಕೊಂಡಿದೆ ಎನ್ನಲಾಗಿದೆ. ಒಕ್ಕೂಟವು JNU ಪ್ರವೇಶ ಪರೀಕ್ಷೆ (JNUEE)ಯಲ್ಲಿ ಹಳೆಯ ಪದ್ಧತಿ ಜಾರಿ, ಕ್ಯಾಂಪಸ್ ನಲ್ಲಿ ಜಾತಿ ಗಣತಿ ನಡೆಸುವುದು, ವಿದ್ಯಾರ್ಥಿವೇತನ ಮೊತ್ತ ಹೆಚ್ಚಿಸುವುದು ಸೇರಿದಂತೆ ಪ್ರವೇಶಕ್ಕಾಗಿ ಮುಖತಃ ಸಂದರ್ಶನಕ್ಕೆ ನೀಡಲಾದ ಪ್ರಾಮುಖ್ಯತೆಯನ್ನು ಕಡಿತ ಮಾಡುವ ಪ್ರಸ್ತಾವವಿಟ್ಟಿದೆ ಎಂದು ತಿಳಿದು ಬಂದಿದೆ.
ಆದರೆ, ಮುಂದಿನ ವರ್ಷದಿಂದ ಹಳೆಯ ಪ್ರವೇಶ ಪದ್ಧತಿಯನ್ನು ಜಾರಿಗೊಳಿಸುವ ಬಗ್ಗೆ ಯಾವುದೇ ಭರವಸೆ ನೀಡಲಾಗಿಲ್ಲ ಎಂದು JNU ತಿಳಿಸಿದೆ.
ಒಪ್ಪಿತ ಬೇಡಿಕೆಗಳ ಲಿಖಿತ ದೃಢೀಕರಣಕ್ಕೆ ಒತ್ತಾಯಿಸಿ, ಒಕ್ಕೂಟವು ತನ್ನ ಪ್ರತಿಭಟನೆಯನ್ನು ಮುಂದುವರೆಸಿದೆ. ಒಕ್ಕೂಟದ ಅಧ್ಯಕ್ಷ ಧನಂಜಯ್ ಮತ್ತು ಕೌನ್ಸಿಲರ್ ನಿತೀಶ್ ಕುಮಾರ್ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ. ಸೋಮವಾರ 16ನೇ ದಿನಕ್ಕೆ ಕಾಲಿಟ್ಟಿದೆ. ಆಗಸ್ಟ್ 11ರಿಂದ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.