ದ್ವಿತೀಯ ಟೆಸ್ಟ್ | ಶ್ರೀಲಂಕಾ ಗೆಲುವಿಗೆ 483 ರನ್ ಗುರಿ ನೀಡಿದ ಇಂಗ್ಲೆಂಡ್
ಲಾರ್ಡ್ಸ್ : ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಶ್ರೀಲಂಕಾ ತಂಡದ ಗೆಲುವಿಗೆ 483 ರನ್ ಗುರಿ ನೀಡಿದೆ.
1 ವಿಕೆಟ್ ನಷ್ಟಕ್ಕೆ 25 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡ ಜೋ ರೂಟ್ ಶತಕ(103 ರನ್, 121 ಎಸೆತ)ದ ಸಹಾಯದಿಂದ 251 ರನ್ ಗಳಿಸಿತು. ಲಂಕಾದ ಗೆಲುವಿಗೆ ಕಠಿಣ ಗುರಿ ನೀಡಿತು. ರೂಟ್ ಹೊರತುಪಡಿಸಿದರೆ ಹ್ಯಾರಿ ಬ್ರೂಕ್(37 ರನ್), ಜಮಿ ಸ್ಮಿತ್(26 ರನ್)ಹಾಗೂ ಬೆನ್ ಡಕೆಟ್(24 ರನ್)ಎರಡಂಕೆಯ ಸ್ಕೋರ್ ಗಳಿಸಿದರು. ಶ್ರೀಲಂಕಾದ ಪರ ಅಸಿತ ಫೆರ್ನಾಂಡೊ(3-52) ಹಾಗೂ ಲಹಿರು ಕುಮಾರ(3-53)ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಮಿಲನ್ ರತ್ನನಾಯಕೆ(2-36) ಹಾಗೂ ಪ್ರಭಾತ್ ಜಯಸೂರ್ಯ(2-105)ತಲಾ 2 ವಿಕೆಟ್‌ಗಳನ್ನು ಪಡೆದರು.
ರೂಟ್ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ತಲುಪಿದರು. 2ನೇ ಇನಿಂಗ್ಸ್‌ನಲ್ಲಿ ತನ್ನ 34ನೇ ಶತಕವನ್ನು ತಲುಪಿದ ರೂಟ್ ಅವರು ನಿವೃತ್ತಿಗೆ ಮೊದಲು 33 ಶತಕಗಳನ್ನು ಸಿಡಿಸಿದ್ದ ಅಲಿಸ್ಟೈರ್ ಕುಕ್ ಅವರ ದಾಖಲೆಯನ್ನು ಮುರಿದರು. ಪಂದ್ಯದ 3ನೇ ದಿನವಾದ ಶನಿವಾರ ಲಹಿರು ಕುಮಾರ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿ ರೂಟ್ ಶತಕ ಪೂರೈಸಿದರು. ರೂಟ್ 111 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ಮೂರಂಕೆ ದಾಟಿದರು.
ರೂಟ್ 145ನೇ ಟೆಸ್ಟ್ ಪಂದ್ಯದಲ್ಲಿ 34ನೇ ಶತಕ ಗಳಿಸಿದರು. ಕುಕ್ 33 ಶತಕ ಗಳಿಸಲು 161 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು. ರೂಟ್ ಮೊದಲ ಇನಿಂಗ್ಸ್‌ನಲ್ಲಿ 143 ರನ್ ಗಳಿಸಿ ಕುಕ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಪಂದ್ಯದಲ್ಲಿ ಸತತ 2ನೇ ಶತಕ ಗಳಿಸಿದ ರೂಟ್ ಇಂಗ್ಲೆಂಡ್ ನ ಟೆಸ್ಟ್ ಕ್ರಿಕೆಟ್ ಇತಿಹಾಸದ ಓರ್ವ ಶ್ರೇಷ್ಠ ಬ್ಯಾಟರ್ ಎನಿಸಿಕೊಂಡರು.
ಕ್ರಿಕೆಟ್‌ನ ತವರು ಲಾರ್ಡ್ಸ್‌ನಲ್ಲಿ ರೂಟ್ ಅವರು 7ನೇ ಶತಕ ಸಿಡಿಸಿ ಇಂಗ್ಲೆಂಡ್‌ನ ಜೋಡಿ ಗ್ರಹಾಂ ಗೂಚ್ ಹಾಗೂ ಮೈಕಲ್ ವಾನ್ ಅವರ ದಾಖಲೆ ಮುರಿದರು. ಈ ಇಬ್ಬರು ತಲಾ 6 ಶತಕ ಗಳಿಸಿದ್ದರು. ಲಾರ್ಡ್ಸ್ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ 4ನೇ ಬ್ಯಾಟರ್ ರೂಟ್. ಈ ಮೂಲಕ ವಿಂಡೀಸ್‌ನ ಲೆಜೆಂಡ್ ಜಾರ್ಜ್ ಹೆಡ್ಲಿ(1939), ಗೂಚ್(1990)ಹಾಗೂ ವಾನ್(2004)ಅವರೊಂದಿಗೆ ಸೇರಿಕೊಂಡರು.
34ನೇ ಶತಕ ಗಳಿಸಿದ ರೂಟ್ ಸಾರ್ವಕಾಲಿಕ ಶ್ರೇಷ್ಠ ಶತಕವೀರರ ಪಟ್ಟಿಯಲ್ಲಿ ಯೂನಿಸ್ ಖಾನ್, ಸುನೀಲ್ ಗವಾಸ್ಕರ್, ಬ್ರಿಯಾನ್ ಲಾರಾ, ಮಹೇಲ ಜಯರ್ಧನೆ ಅವರೊಂದಿಗೆ ಆರನೇ ಸ್ಥಾನ ಹಂಚಿಕೊಂಡಿದ್ದಾರೆ.