ತಮಿಳುನಾಡು | BMW ಕಾರು ಢಿಕ್ಕಿ ಹೊಡೆದು ಪತ್ರಕರ್ತ ಮೃತ್ಯು
ಚೆನ್ನೈ: ವೇಗವಾಗಿ ಬರುತ್ತಿದ್ದ ಕಾರೊಂದು ತಾವು ಚಲಾಯಿಸುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ವಿಡಿಯೊ ಪತ್ರಕರ್ತ ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ಚೆನ್ನೈನಲ್ಲಿ ನಡೆದಿದೆ.
ಮೃತ ಪತ್ರಕರ್ತನನ್ನು ಪಾಂಡಿ ಬಝಾರ್ ನಿವಾಸಿ ಪ್ರದೀಪ್ ಕುಮಾರ್ ಎಂದು ಗುರುತಿಸಲಾಗಿದ್ದು, ಅವರು ಜನಪ್ರಿಯ ತಮಿಳು ವಾಹಿನಿಯೊಂದರಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದರೊಂದಿಗೆ ಚೆನ್ನೈನಲ್ಲಿ ರ್ಯಾಪಿಡೊ ಚಾಲಕರಾಗಿ ಅರೆಕಾಲಿಕ ಉದ್ಯೋಗವನ್ನೂ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ವೇಗವಾಗಿ ಬರುತ್ತಿದ್ದ ಬಿಎಂಡಬ್ಲ್ಯೂ ಕಾರೊಂದು ಮದುರವೋಯಲ್-ತಾಂಬರಮ್ ಎತ್ತರಿಸಿದ ಬೈಪಾಸ್ ನಲ್ಲಿ ಮೋಟರ್ ಬೈಕ್ ನಲ್ಲಿ ತೆರಳುತ್ತಿದ್ದ ಕುಮಾರ್ ಗೆ ಢಿಕ್ಕಿ ಹೊಡೆದಿದ್ದರಿಂದ, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸಿದ ನಂತರ ಕಾರಿನ ಚಾಲಕನು ಸ್ಥಳದಲ್ಲೇ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ.
ಅಪಘಾತದ ನಂತರ ವಾರಸುದಾರರಿಲ್ಲದ ಕಾರಿನ ಕುರಿತು ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಜಖಂಗೊಂಡಿರುವ ದ್ವಿಚಕ್ರ ವಾಹನ ಕಂಡು ಬಂದಿದೆ.
ಘಟನಾ ಸ್ಥಳದಿಂದ 100 ಮೀಟರ್ ದೂರದಲ್ಲಿ ಪ್ರದೀಪ್ ಕುಮಾರ್ ಅವರ ದೇಹ ಪತ್ತೆಯಾದ ನಂತರವಷ್ಟೇ ಅವರು ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಎತ್ತರಿಸಿದ ಬೈಪಾಸ್ ನಿಂದ ಕೆಳಗೆ 100 ಮೀಟರ್ ದೂರದಲ್ಲಿ ಪ್ರದೀಪ್ ಕುಮಾರ್ ಮೃತದೇಹ ಪತ್ತೆಯಾಗಿದೆ.
ಪೊಲೀಸರ ಪ್ರಕಾರ, ಈ ಢಿಕ್ಕಿಯಿಂದ ಪ್ರದೀಪ್ ಕುಮಾರ್ ತಮ್ಮ ವಾಹನದಿಂದ 100 ಮೀಟರ್ ದೂರ ಹಾರಿ ಬಿದ್ದಿದ್ದು, ಬೈಪಾಸ್ ನಿಂದ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸದ್ಯ, ಪೊಲೀಸರು ತಲೆಮರೆಸಿಕೊಂಡಿರುವ ಬಿಎಂಡಬ್ಲ್ಯೂ ಕಾರು ಚಾಲಕನಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ.