ವಿಚ್ಛೇದನ ಘೋಷಿಸಿದ ಎ.ಆರ್.ರಹ್ಮಾನ್ ಪತ್ನಿ ಸಾಯಿರಾ ಬಾನು
ಮುಂಬೈ: ಸಂಗೀತ ಕ್ಷೇತ್ರದ ಮಾಂತ್ರಿಕ ಎ.ಆರ್.ರಹ್ಮಾನ್ ಅವರ ಪತ್ನಿ ಸಾಯಿರಾ ಬಾನು ಅಧಿಕೃತವಾಗಿ ವಿಚ್ಛೇದನ ಘೋಷಿಸಿದ್ದಾರೆ. ಸಾಯಿರಾ ಪರ ವಕೀಲರಾದ ವಂದನಾ ಶಾ ಈ ಸಂಬಂಧ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
"ವಿವಾಹವಾದ ಹಲವು ವರ್ಷಗಳ ಬಳಿಕ, ಸಾಯಿರಾ ಅವರು ಪತಿ ಎ.ಆರ್.ರಹ್ಮಾನ್ ಅವರಿಂದ ಬೇರ್ಪಡುವ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಅವರ ಸಂಬಂಧದಲ್ಲಿ ಮಹತ್ವದ ಭಾವನಾತ್ಮಕ ಸಂಘರ್ಷದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಪರಸ್ಪರ ನಡುವೆ ಗಾಢ ಪ್ರೀತಿ ಇದ್ದರೂ, ಉದ್ವಿಗ್ನತೆ ಮತ್ತು ಕಠಿಣ ಪರಿಸ್ಥಿತಿಗಳು ಅವರಿಬ್ಬರ ನಡುವೆ ಅಂತರ ಸೃಷ್ಟಿಸಿದ್ದವು. ಇಬ್ಬರಿಗೂ ಇದನ್ನು ಬಗೆಹರಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ತೀವ್ರ ನೋವು ಮತ್ತು ದುಃಖದಿಂದ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಸಾಯಿರಾ ಒತ್ತಿ ಹೇಳಿದ್ದಾರೆ. ಜೀವನದ ಕಠಿಣ ಅಧ್ಯಾಯದಲ್ಲಿ ಮುಂದುವರಿಯಬೇಕಾದ ಈ ಸವಾಲಿನ ಸಂದರ್ಭದಲ್ಲಿ ಖಾಸಗಿತನಕ್ಕೆ ಅವಕಾಶ ಕಲ್ಪಿಸುವಂತೆ ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ" ಎಂದು ವಕೀಲರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
"ಮೂವತ್ತನ್ನು ತಲುಪುವ ನಿರೀಕ್ಷೆ ನಮ್ಮದಾಗಿತ್ತು; ಆದರೆ ಅದೃಶ್ಯ ಕಾರಣಗಳಿಂದ ಕೊನೆಯಾಗುವಂತೆ ಕಾಣುತ್ತಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನ ಕೂಡಾ ಉರುಳಿದೆ. ಇಷ್ಟಾಗಿಯೂ ಈ ತುಂಡುಗಳು ಮತ್ತೆ ಜೋಡಿಕೊಳ್ಳದಿದ್ದರೂ ಈ ವಿದ್ರಾವಕ ಪರಿಸ್ಥಿತಿಯಲ್ಲಿ ನಾವು ಅರ್ಥವನ್ನು ಕಂಡುಕೊಳ್ಳುತ್ತೇವೆ. ಸ್ನೇಹಿತರೇ, ಜೀವನದ ಈ ಕಠಿಣ ಅಧ್ಯಾಯವನ್ನು ದಾಟುತ್ತಿರುವ ನಮ್ಮ ಖಾಸಗಿತನವನ್ನು ಗೌರವಿಸುತ್ತಿರುವ ನಿಮ್ಮ ಕರುಣೆಗೆ ಧನ್ಯವಾದಗಳು" ಎಂದು ರಹ್ಮಾನ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ರಹ್ಮಾನ್ ಹಾಗೂ ಸಾಯಿರಾ 1995ರಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದರು. ರಹಮಾನ್ ಅವರ ತಾಯಿ ಈ ವಿವಾಹ ಸಂಬಂಧ ಬೆಸೆದಿದ್ದರು. "ಎಡೆಬಿಡದ ಕಾರ್ಯದ ಒತ್ತಡದ ಹಿನ್ನೆಲೆಯಲ್ಲಿ 29ನೇ ವಯಸ್ಸಿನಲ್ಲಿ ನಾನು ವಧುವನ್ನು ಅರಸುವಂತೆ ತಾಯಿಗೆ ಕೇಳಿಕೊಂಡಿದ್ದಕ್ಕೆ ತಾಯಿ ಈ ಸಂಬಂಧ ಹುಡುಕಿದ್ದರು" ಎಂದು ಸಿಮಿ ಗರೇವಾಲ್ ಅವರ ಟಾಕ್ ಶೋದಲ್ಲಿ ರಹಮಾನ್ ಸ್ಪಷ್ಟಪಡಿಸಿದ್ದರು.