ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಮತದಾನ ಆರಂಭ
ಮುಂಬೈ: ಎನ್‌ಸಿಪಿ ಮತ್ತು ಶಿವಸೇನೆ ಇಬ್ಭಾಗವಾಗಿ ರಾಜಕೀಯ ಮರು ಹೊಂದಾಣಿಕೆ ನಡೆದ ಬಳಿಕ ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಬುಧವಾರ ಮುಂಜಾನೆ 7ಕ್ಕೆ ಮತದಾನ ಆರಂಭವಾಗಿದೆ. ನಗದು, ಜಾತಿ, ಬೆಳೆ ಹಾಗೂ ಬಹುಶಃ ಸಮುದಾಯ ಈ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳು ಎಂದು ವಿಶ್ಲೇಷಿಸಲಾಗುತ್ತಿದೆ.
ಎಲ್ಲ 288 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಈ ತಿಂಗಳ 23ರಂದು ಫಲಿತಾಂಶ ಹೊರಬೀಳಲಿದೆ. 4136 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಾಗಲಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಶೇಕಡ 28ರಷ್ಟು ಏರಿಕೆಯಾಗಿದೆ. ಈ ಪೈಕಿ 2086 ಮಂದಿ ಪಕ್ಷೇತರರು, ಸಣ್ಣ ಪಕ್ಷಗಳಾದ ಬಿಎಸ್‌ಪಿಯ 237 ಮಂದಿ ಹಾಗೂ ಎಐಎಂಐಎಂನ 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ವಿರೋಧ ಪಕ್ಷಗಳ ಎಂವಿಎ ಮೈತ್ರಿಕೂಟ ಲೋಕಸಭಾ ಚುನಾವಣೆಯಲ್ಲಿ, ಆಡಳಿತಾರೂಢ ಮಹಾಯುತಿ ಕೂಟಕ್ಕೆ ತಿರುಗೇಟು ನೀಡಿ ಜಯ ಸಾಧಿಸಿದ ಕೇವಲ ಆರು ತಿಂಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ. ಎರಡೂ ಮೈತ್ರಿಕೂಟಗಳ ನಡುವಿನ ಮತ ಪ್ರಮಾಣದಲ್ಲಿ ಅಂತರ ಶೇಕಡ 1ಕ್ಕಿಂತ ಕಡಿಮೆ ಇದ್ದರೂ, ವಿರೋಧ ಪಕ್ಷಗಳು 30 ಲೋಕಸಭಾ ಸ್ಥಾನಗಳನ್ನು ಗೆದ್ದರೆ, ಎನ್‌ಡಿಎ 17ಕ್ಕೆ ತೃಪ್ತಿಪಟ್ಟುಕೊಂಡಿತ್ತು. 125 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಹಾಯುತಿ ಮುನ್ನಡೆ ಸಾಧಿಸಿದ್ದರೆ, 153 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎಂವಿಎ ಮುನ್ನಡೆಯಲ್ಲಿತ್ತು.
ಆದರೆ ಹರ್ಯಾಣದಲ್ಲಿ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿ ಮೂರನೇ ಬಾರಿಗೆ ಗದ್ದುಗೆ ಹಿಡಿದಂತೆ ಬಿಜೆಪಿ ಮಹಾರಾಷ್ಟ್ರದಲ್ಲೂ ಅಧಿಕಾರ ಉಳಿಸಿಕೊಳ್ಳುವ ಕನಸು ಕಾಣುತ್ತಿದೆ.
ಇತರ ಹಲವು ಅಂಶಗಳ ಜತೆಗೆ ಪ್ರಮುಖ ಎರಡು ಪ್ರಾದೇಶಿಕ ಪಕ್ಷಗಳ ವಿಭಜನೆ ಫಲಿತಾಂಶದ ಮೇಲೆ ಪ್ರಭಾವ ಬೀರುವ ನಿರ್ಣಾಯಕ ಅಂಶ ಎನ್ನಲಾಗುತ್ತಿದೆ. ಶಿವಸೇನೆಯ ಏಕನಾಥ್ ಶಿಂಧೆ ಬಣ ಮತ್ತು ಉದ್ಧವ್ ಠಾಕ್ರೆ ಶಿವಸೇನೆ (ಯುಬಿಟಿ) ನಡುವೆ 51 ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ಇದೆ. ಅಂತೆಯೇ ಎನ್‌ಸಿಪಿ (ಶರದ್ ಪವಾರ್) ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಡುವೆ 36 ಕ್ಷೇತ್ರಗಳಲ್ಲಿ ಹೋರಾಟ ಏರ್ಪಟ್ಟಿದೆ.
ಬಂಡಾಯ ಅಭ್ಯರ್ಥಿಗಳು, ಸಣ್ಣ ಪಕ್ಷಗಳು ಮತ್ತು ಪಕ್ಷೇತರರು ಕೂಡಾ ತುರುಸಿನ ಸ್ಪರ್ಧೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ, ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ ಅಘಾಡಿ, ಮಾಧವ್ ಜಾನ್ಕರ್ ಅವರ ರಾಷ್ಟ್ರೀಯ ಸಮಾಜ ಪಕ್ಷ ಹಾಗೂ ಹಿತೇಂದ್ರ ಠಾಕೂರ್ ಅವರ ಬಹುಜನ ವಿಕಾಸ ಅಘಾಡಿ ಪ್ರಮುಖ ಸಣ್ಣ ಪಕ್ಷಗಳಾಗಿವೆ.