ಲೈಂಗಿಕ ಕಿರುಕುಳ ತಡೆಯಲು ನ್ಯಾ.ಹೇಮಾ ಸಮಿತಿ ತುಂಬಾ ಅಗತ್ಯವಿತ್ತು : ನಟಿ ಖುಷ್ಬು
ಚೆನ್ನೈ : ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ವೃತ್ತಿಪರರು ಎದುರಿಸುತ್ತಿರುವ ದೌರ್ಜನ್ಯದ ಬಗ್ಗೆ ವರದಿ ನೀಡಿ ಕೇರಳ ಸರಕಾರ ರಚಿಸಿದ್ದ ನ್ಯಾಯಮೂರ್ತಿ ಕೆ ಹೇಮಾ ಸಮಿತಿಯು ಅತ್ಯಂತ ಅಗತ್ಯವಿತ್ತು ಎಂದು ನಟಿ-ರಾಜಕಾರಣಿ ಖುಷ್ಬು ಸುಂದರ್ ಬುಧವಾರ ತಿಳಿಸಿದ್ದಾರೆ.
ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ನಟಿಯರು ರಾಜಿ ಮಾಡಿಕೊಳ್ಳಬಾರದು. ಪುರುಷರು ಸಂತ್ರಸ್ತರ ಪರವಾಗಿ ಮಾತನಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ನಟಿ ಖುಷ್ಬು, ನಿರ್ಭಯವಾಗಿ ನಿಂತು ವಿಜಯಶಾಲಿಯಾಗಿ ಹೊರಹೊಮ್ಮಿದ ಮಹಿಳೆಯರಿಗೆ ಅಭಿನಂದನೆಗಳು. ಲೈಂಗಿಕ ಕಿರುಕುಳ ತಡೆಯಲು ನ್ಯಾ.ಹೇಮಾ ಸಮಿತಿ ತುಂಬಾ ಅಗತ್ಯವಿತ್ತು. ಆದರೆ ಹಾಗಾಗಲಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
2017 ರಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣ ಹೊರಬಂದ ನಂತರ ಕೇರಳ ಸರಕಾರವು ನಿವೃತ್ತ ನ್ಯಾಯಮೂರ್ತಿ ಹೇಮಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಸಮಿತಿಯು ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರಿಗೆ ಕಿರುಕುಳ ಮತ್ತು ಶೋಷಣೆಯ ನಿದರ್ಶನಗಳನ್ನು ತನ್ನ ವರದಿಯಲ್ಲಿ ಬಹಿರಂಗಪಡಿಸಿತು.
ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುವುದು, ದೌರ್ಜನ್ಯವೆಸಗುವುದು, ಪ್ರತಿ ಕ್ಷೇತ್ರದಲ್ಲೂ ಅಸ್ತಿತ್ವದಲ್ಲಿದೆ. ಮಹಿಳೆಯರೇ ಹೆಚ್ಚಾಗಿ ಈ ರೀತಿಯ ದೌರ್ಜನ್ಯಗಳ ಬಲಿಪಶುಗಳಾಗುತ್ತಿದ್ದಾರೆ. ಸ್ವಲ್ಪ ಮಟ್ಟಿಗೆ ಪುರುಷರ ಮೇಲೂ ಈ ರೀತಿಯ ದೌರ್ಜನ್ಯಗಳು ನಡೆಯುತ್ತವೆ ಎಂದು ಖುಷ್ಬೂ ಹೇಳಿದ್ದಾರೆ.
ಕೆಲವೇ ಮಹಿಳೆಯರು ದೌರ್ಜನ್ಯಗಳನ್ನು ಸಹಿಸಿ ಸುಮ್ಮನಾಗುತ್ತಾರೆ. ಅವಮಾನಕ್ಕೊಳಗಾಗುವ ಭಯ, ಸಂತ್ರಸ್ತರನ್ನೇ ದೂಷಿಸುವ ಪರಿಪಾಠ, ಎದುರಾಗುವ ನೂರಾರು ಪ್ರಶ್ನೆಗಳು ಅವರನ್ನು ನೋವು ಸಹಿಸಿಕೊಳ್ಳುವಂತೆ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
"ಸಂತ್ರಸ್ತರು ನಿಮಗೆ ಅಥವಾ ನನಗೆ ಅಪರಿಚಿತರಾಗಿರಬಹುದು. ಆದರೆ ಆಕೆಗೆ ನಮ್ಮ ಬೆಂಬಲ ನೀಡಬೇಕು. ಆಕೆಯ ನೋವುಗಳಿಗೆ ನಾವು ಕಿವಿಯಾಗಬೇಕು. ನಮ್ಮೆಲ್ಲರಿಂದ ಆಕೆಗೆ ಭಾವನಾತ್ಮಕ ಬೆಂಬಲ ಬೇಕು. ಸಂತ್ರಸ್ತೆ ಏಕೆ ಮುಂಚೆಯೇ ಹೇಳಲಿಲ್ಲ ಎಂದು ಕೇಳುವ ಬದಲು ಆಕೆಯ ಪರಿಸ್ಥಿತಿಯ ಬಗ್ಗೆ ನಾವು ಯೋಚಿಸಬೇಕು” ಎಂದು ಖುಷ್ಬು ಹೇಳಿದ್ದಾರೆ.