ಕಾಂಗ್ರಾ ಜಿಲ್ಲೆಯ ಗಗ್ಗಲ್ ವಿಮಾನ ನಿಲ್ದಾಣ ವಿಸ್ತರಣಾ ಯೋಜನೆ ಪ್ರಕರಣ : ಹಿಮಾಚಲ ಪ್ರದೇಶ ಹೈಕೋರ್ಟ್ ತಡೆಯಾಜ್ಞೆಗೆ ʼಸುಪ್ರೀಂʼ ತಡೆ
ಹೊಸ ದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರಾ ಜಿಲ್ಲೆಯ ಗಗ್ಗಲ್ ವಿಮಾನ ನಿಲ್ದಾಣ ವಿಸ್ತರಣಾ ಯೋಜನೆಗೆ ಹಿಮಾಚಲ ಪ್ರದೇಶ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ ಎಂದು thehindu.com ವರದಿ ಮಾಡಿದೆ.
ಗಗ್ಗಲ್ ವಿಮಾನ ನಿಲ್ದಾಣ ವಿಸ್ತರಣೆ ಸಂತ್ರಸ್ತರ ಕಲ್ಯಾಣ ಸಮಿತಿಯು ಸಲ್ಲಿಸಿದ್ದ ಅರ್ಜಿಯನ್ನು ಗಣನೆಗೆ ತೆಗೆದುಕೊಂಡಿದ್ದ ಹಿಮಾಚಲ ಪ್ರದೇಶ ಹೈಕೋರ್ಟ್, ಗಗ್ಗಲ್ ವಿಮಾನ ನಿಲ್ದಾಣ ವಿಸ್ತರಣಾ ಯೋಜನೆಗೆ ತಡೆ ನೀಡಿತ್ತು.
ಪರಿಹಾರ ಮತ್ತು ಪುನರ್ವಸತಿ ಪ್ರಕ್ರಿಯೆ, ಸ್ವಾಧೀನ ಅಧಿಸೂಚನೆಗೊಳಪಟ್ಟಿರುವ ಜಮೀನನ್ನು ವಶಕ್ಕೆ ತೆಗೆದುಕೊಳ್ಳುವುದು ಹಾಗೂ ಆ ಜಮೀನಿನ ಮೇಲೆ ಇರುವ ಕಟ್ಟಡಗಳನ್ನು ನೆಲಸಮಗೊಳಿಸುವುದು ಸೇರಿದಂತೆ ಈ ವಿಷಯಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳಲ್ಲಿ ಮುಂದಿನ ವಿಚಾರಣಾ ದಿನಾಂಕವಾದ ಫೆಬ್ರವರಿ 29ರವರೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.
ಈ ಆದೇಶವನ್ನು ಪ್ರಶ್ನಿಸಿ ಹಿಮಾಚಲ ಪ್ರದೇಶ ಸರ್ಕಾರ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲ್ಲಿಸಿದ್ದ ಅರ್ಜಿಯನ್ನು ಗಣನೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ. ಮನೋಜ್ ಮಿಶ‍್ರಾ ಅವರನ್ನೊಳಗೊಂಡ ನ್ಯಾಯಪೀಠವು, ಹೈಕೋರ್ಟ್ ನ ಆದೇಶಕ್ಕೆ ತಡೆ ನೀಡಿತು.
ಸರ್ಕಾರಿ ಪ್ರಾಧಿಕಾರಗಳ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಹಿಮಾಚಲ ಪ್ರದೇಶದಲ್ಲಿರುವ ಮೂರು ವಿಮಾನ ನಿಲ್ದಾಣಗಳ ಪೈಕಿ ಕಾಂಗ್ರಾ ವಿಮಾನ ನಿಲ್ದಾಣವನ್ನು ಮಾತ್ರ ವಿಸ್ತರಿಸಬಲ್ಲ ಅವಕಾಶವಿದೆ. ಅಲ್ಲಿ ಯಾವುದೇ ಕಟ್ಟಡಗಳನ್ನು ನೆಲಸಮಗೊಳಿಸುವುದಿಲ್ಲ ಅಥವಾ ಯಾರನ್ನೂ ಸ್ಥಳಾಂತರಿಸುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ಭರವಸೆ ನೀಡಿದ್ದರೂ, ಹೈಕೋರ್ಟ್ ಆದೇಶದಿಂದ ಎಲ್ಲ ಕಾಮಗಾರಿಗಳೂ ನೆನೆಗುದಿಗೆ ಬಿದ್ದಿವೆ ಎಂದು ವಾದಿಸಿದರು.
ವಿಸ್ತರಣಾ ಯೋಜನೆಯ ಜಾಗವು ಭೂಕಂಪ ಸಾಧ್ಯತೆಯ ಪ್ರದೇಶದಲ್ಲಿರುವುದರಿಂದ ವಿಮಾನ ನಿಲ್ದಾಣ ವಿಸ್ತರಣೆಗೆ ಅವಕಾಶ ನೀಡಕೂಡದು ಎಂದು ವಕೀಲರೊಬ್ಬರು ವಾದಿಸಿದಾಗ, “ಅಲ್ಲಿ ಈಗಾಗಲೇ ವಿಮಾನ ನಿಲ್ದಾಣವಿದೆ ಹಾಗೂ ಇದು ಅದರ ವಿಸ್ತರಣಾ ಯೋಜನೆ” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಪ್ರತ್ಯುತ್ತರ ನೀಡಿದರು.
“ನಾವು ನೋಟಿಸ್ ಜಾರಿ ಮಾಡುತ್ತೇವೆ ಹಾಗೂ ಹಿಮಾಚಲ ಪ್ರದೇಶ ಹೈಕೋರ್ಟ್ ನ ಆದೇಶಕ್ಕೆ ತಡೆ ನೀಡುತ್ತೇವೆ” ಎಂದು ಹೇಳಿದ ನ್ಯಾಯಪೀಠವು, ಆದರೆ, ಬಾಕಿಯಿರುವ ಅರ್ಜಿಯ ಕುರಿತು ಹೈಕೋರ್ಟ್ ತನ್ನ ವಿಚಾರಣೆಯನ್ನು ಮುಂದುವರಿಸಿ, ನಿರ್ಧಾರ ಕೈಗೊಳ್ಳಬಹುದು ಎಂದೂ ಹೇಳಿತು.