ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಪ್ರಮುಖ ಆರೋಪಿ ಮತ್ತು ಪ್ರಧಾನ ಪಿತೂರಿಗಾರ | ಸುಪ್ರೀಂ ಕೋರ್ಟ್ ಗೆ ಅಫಿದಾವಿತ್ ಸಲ್ಲಿಸಿದ ಈಡಿ
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದಿಲ್ಲಿ ಸರಕಾರದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದಲ್ಲಿ ಪ್ರಮುಖ ಆರೋಪಿ ಮತ್ತು ಪ್ರಧಾನ ಪಿತೂರಿಗಾರ ಆಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಈಡಿ)ವು ಸುಪ್ರೀಂ ಕೋರ್ಟ್ ಗೆ ಹೇಳಿದೆ. ಅಪರಾಧ ಮಾಡಿರುವುದಕ್ಕಾಗಿ ವ್ಯಕ್ತಿಯೋರ್ವನನ್ನು ಸಾಕ್ಷ್ಯಗಳ ಆಧಾರದಲ್ಲಿ ಬಂಧಿಸುವುದು ‘‘ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಯ ಕಲ್ಪನೆ’’ಯನ್ನು ಉಲ್ಲಂಘಿಸುವುದಿಲ್ಲ ಎಂದು ಅದು ಹೇಳಿದೆ.
ಅವ್ಯವಹಾರದಲ್ಲಿ ಅರವಿಂದ ಕೇಜ್ರಿವಾಲ್ ತನ್ನ ಸಚಿವರೊಂದಿಗೆ ಮತ್ತು ಅವರ ಪಕ್ಷದ ನಾಯಕರೊಂದಿಗೆ ಶಾಮೀಲಾಗಿದ್ದಾರೆ ಮತ್ತು ನೀತಿಯಲ್ಲಿ ರಿಯಾಯಿತಿಗಳನ್ನು ನೀಡಿ ಮದ್ಯ ಉದ್ಯಮಿಗಳಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವು 734 ಪುಟಗಳ ಅಫಿದಾವಿತ್ ನಲ್ಲಿ ಆರೋಪಿಸಿದೆ.
2002ರ ಪಿಎಮ್ಎಲ್ಎಯ ವಿಧಿಗಳು, ಬಂಧನದಲ್ಲಿ ಓರ್ವ ಮುಖ್ಯಮಂತ್ರಿ ಅಥವಾ ಓರ್ವ ಸಾಮಾನ್ಯ ವ್ಯಕ್ತಿಯ ನಡುವೆ ತಾರತಮ್ಯ ಮಾಡುವುದಿಲ್ಲ. ಅರ್ಜಿದಾರರು ತನ್ನ ಹುದ್ದೆಯನ್ನು ಮುಂದಿಟ್ಟುಕೊಂಡು ತನಗಾಗಿ ವಿಶೇಷ ವರ್ಗವೊಂದನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಅದು ಸ್ವೀಕಾರಾರ್ಹವಲ್ಲ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.
ತನ್ನ ಬಂಧನವು ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಯ ಮೂಲ ಸಿದ್ಧಾಂತ ಮತ್ತು ಆಶಯವನ್ನು ಉಲ್ಲಂಘಿಸುತ್ತದೆ ಎಂಬ ಕೇಜ್ರಿವಾಲ್ ರ ವಾದವನ್ನು ವಿರೋಧಿಸಿದ ಕೇಂದ್ರೀಯ ತನಿಖಾ ಸಂಸ್ಥೆ, ‘‘ವ್ಯಕ್ತಿಯೋರ್ವ ಎಷ್ಟೇ ದೊಡ್ಡವನಾದರೂ, ಅಪರಾಧ ನಡೆಸಿರುವುದಕ್ಕಾಗಿ ಸಾಕ್ಷ್ಯಗಳ ಆಧಾರದಲ್ಲಿ ಆತನನ್ನು ಬಂಧಿಸುವುದು ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಯ ಕಲ್ಪನೆಯ ಉಲ್ಲಂಘನೆಯಾಗುವುದಿಲ್ಲ’’ ಎಂದು ಅದು ಹೇಳಿದೆ.