ಪೋಸ್ಟರ್‌ನಿಂದ ಕೇಜ್ರಿವಾಲ್ ಫೋಟೋ ಕೈಬಿಟ್ಟ INDIA ಮೈತ್ರಿಕೂಟ: ಕುತೂಹಲಕ್ಕೆ ಕಾರಣವಾದ ಮುಂಬೈ ಸಭೆ

Update: 2023-08-30 13:57 GMT

Photo: ANI

ಹೊಸ ದಿಲ್ಲಿ: ವಿರೋಧ ಪಕ್ಷಗಳ ಮೈತ್ರಿಕೂಟವಾದ INDIAದ ಮಹತ್ವದ ಮೂರನೆಯ ಸಭೆಯ ಪೋಸ್ಟರ್ ನಿಂದ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಚಿತ್ರವನ್ನು ಕೈಬಿಡಲಾಗಿದ್ದು, ಇದರ ಬೆನ್ನಿಗೇ ಅರವಿಂದ್ ಕೇಜ್ರಿವಾಲ್ ಪ್ರಧಾನ ಮಂತ್ರಿ ಅಭ್ಯರ್ಥಿಯ ರೇಸ್ ನಲ್ಲಿ ಇಲ್ಲ ಎಂದು ಆಮ್ ಆದ್ಮಿ ಪಕ್ಷದ ನಾಯಕರಾದ ರಾಘವ್ ಚಡ್ಡಾ ಹಾಗೂ ಸಚಿವೆ ಅಥಿಶಿ ಮರ್ಲೇನಾ ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನ ಅಸ್ತಿತ್ವಕ್ಕೆ ಬಂದಿರುವ ವಿರೋಧ ಪಕ್ಷಗಳ INDIA ಮೈತ್ರಿಕೂಟದ ಮೂರನೆಯ ಹಾಗೂ ಮಹತ್ವದ ಸಭೆ ಆಗಸ್ಟ್ 31ರಂದು ಮುಂಬೈನಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನ, ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಆಮ್ ಆದ್ಮಿ ಪಕ್ಷದ ವಕ್ತಾರೆ ಪ್ರಿಯಾಂಕಾ ಕಕ್ಕರ್ ಆಗ್ರಹಿಸಿದ್ದರು. ಇದರ ಬೆನ್ನಿಗೇ ಕಾಣಿಸಿಕೊಂಡಿದ್ದ INDIA ಮೈತ್ರಿಕೂಟದ ಪೋಸ್ಟರ್ ನಿಂದ ಅರವಿಂದ್ ಕೇಜ್ರಿವಾಲ್ ಅವರ ಚಿತ್ರವನ್ನು ಕೈಬಿಡಲಾಗಿದೆ.

ಈ ಕುರಿತು ANI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ವಕ್ತಾರ ರಾಘವ್ ಚಡ್ಡಾ, ಅರವಿಂದ್ ಕೇಜ್ರಿವಾಲ್ ಪ್ರಧಾನಿ ಅಭ್ಯರ್ಥಿಯ ರೇಸ್ ನಲ್ಲಿ ಇಲ್ಲ. ನಾವು ಪ್ರಧಾನಿ ಹುದ್ದೆಗಾಗಿ INDIA ಮೈತ್ರಿಕೂಟ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ರಾಘವ್ ಚಡ್ಡಾರ ಮಾತನ್ನು ದಿಲ್ಲಿ ಸಚಿವೆ ಅಥಿಶಿ ಮರ್ಲೇನಾ ಕೂಡಾ ಪುನರುಚ್ಚರಿಸಿದ್ದಾರೆ. “ನಮ್ಮ ಬಳಿ ಪ್ರಧಾನಿ ಅಭ್ಯರ್ಥಿಯಿಲ್ಲ” ಎಂದು ಅಥಿಶಿ ಮರ್ಲೇನಾ ಸಮಜಾಯಿಷಿ ನೀಡಿದ್ದಾರೆ. ಇವರೊಂದಿಗೆ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಕೂಡಾ, ಅರವಿಂದ್ ಕೇಜ್ರಿವಾಲ್ ಪ್ರಧಾನಿ ಅಭ್ಯರ್ಥಿ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಗುರಿಯೊಂದಿಗೆ ವಿರೋಧ ಪಕ್ಷಗಳ INDIA ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿದೆ. ಈ ಮೈತ್ರಿಕೂಟದ ಸಂಚಾಲಕ ಹುದ್ದೆಗೆ ಈಗಾಗಲೇ ಬಿರುಸಿನ ಪೈಪೋಟಿ ಶುರುವಾಗಿದ್ದು, ಇದರೊಂದಿಗೆ ಪ್ರಧಾನಿ ಅಭ್ಯರ್ಥಿಯಾಗಲೂ ತೆರೆಮರೆಯ ಕಸರತ್ತುಗಳು ನಡೆಯುತ್ತಿವೆ. INDIA ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿದ್ದು, INDIA ಮೈತ್ರಿಕೂಟದ ಸಭೆಗೂ ಮುನ್ನ ಆಮ್ ಆದ್ಮಿ ಪಕ್ಷವು ಪ್ರಧಾನಿ ಅಭ್ಯರ್ಥಿ ಕುರಿತು ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಇರಸುಮುರಸನ್ನುಂಟು ಮಾಡಿತ್ತು. ಹೀಗಾಗಿ INDIA ಮೈತ್ರಿಕೂಟ ಸಭೆಯ ಪೋಸ್ಟರ್ ನಿಂದ ಅರವಿಂದ್ ಕೇಜ್ರಿವಾಲ್ ಅವರ ಚಿತ್ರವನ್ನು ಕೈಬಿಡಲಾಗಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News