ಈಡಿಯ ಏಳನೆಯ ಸಮನ್ಸ್‌ಗೂ ಅರವಿಂದ್ ಕೇಜ್ರಿವಾಲ್ ಗೈರು

Update: 2024-02-26 05:31 GMT

ಅರವಿಂದ್ ಕೇಜ್ರಿವಾಲ್ (Photo: PTI)

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪದಲ್ಲಿ ಜಾರಿ ನಿರ್ದೇಶನಾಲಯ(ಈಡಿ)ವು ನೀಡಿದ್ದ ಏಳನೆ ಸಮನ್ಸ್‌ಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಗೈರಾಗಿದ್ದಾರೆ. ತನಿಖಾ ಸಂಸ್ಥೆಯು ಪದೇ ಪದೇ ಸಮನ್ಸ್ ಜಾರಿಗೊಳಿಸುವ ಬದಲು ನ್ಯಾಯಾಲಯದ ತೀರ್ಪಿನವರೆಗೂ ಕಾಯಬೇಕು ಎಂದು ಆಮ್ ಆದ್ಮಿ ಪಕ್ಷ ಈಡಿಗೆ ಸೂಚಿಸಿದೆ.

ಅರವಿಂದ್ ಕೇಜ್ರಿವಾಲ್ ಸಮನ್ಸ್‌ಗೆ ಗೈರಾಗುತ್ತಿರುವುದು ಇದು ಏಳನೆಯ ಬಾರಿಯಾಗಿದೆ. ಕಳೆದ ವಾರ ಏಳನೆಯ ಸಮನ್ಸ್ ಜಾರಿಗೊಳಿಸಿದ್ದ ಜಾರಿ ನಿರ್ದೇಶನಾಲಯವು, ತನ್ನ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಅರವಿಂದ್ ಕೇಜ್ರಿವಾಲ್‌ ಅವರಿಗೆ ಸೂಚಿಸಿತ್ತು.

ಆದರೆ, ಜಾರಿ ನಿರ್ದೇಶನಾಲಯದ ಸಮನ್ಸ್‌ಗಳು ಕಾನೂನು ಬಾಹಿರ ಎಂದು ಆರೋಪಿಸಿರುವ ಅರವಿಂದ್ ಕೇಜ್ರಿವಾಲ್ ಆ ಎಲ್ಲ ಸಮನ್ಸ್‌ಗಳಿಗೂ ಗೈರಾಗಿದ್ದಾರೆ. ಇದಲ್ಲದೆ, ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವ ಅರವಿಂದ್ ಕೇಜ್ರಿವಾಲ್, ಆ ಸಮನ್ಸ್‌ಗಳನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಆಮ್ ಆದ್ಮಿ ಪಕ್ಷ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News