ಮಣಿಪುರದಲ್ಲಿ ‘ನರಮೇಧ ’ಕ್ಕಾಗಿ ಕೇರಳದ ಕ್ಯಾಥೊಲಿಕ್ ಚರ್ಚ್ ನಾಯಕರಿಂದ ಮೋದಿ ಸರಕಾರದ ಖಂಡನೆ

Update: 2023-07-02 15:35 GMT

ಮಣಿಪುರ | Photo: PTI

ಹೊಸದಿಲ್ಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಕೇರಳದಲ್ಲಿಯ ಕ್ಯಾಥೊಲಿಕ್ ಚರ್ಚ್ ನಾಯಕರು ಟೀಕಿಸಿದ್ದು, ಹಿಂಸಾಚಾರವು ‘ಸರಕಾರದಿಂದ ಪ್ರಾಯೋಜಿತ ನರಮೇಧ ’ವಾಗಿದೆ ಎಂದು ತಲಶ್ಶೇರಿ ಧರ್ಮಪ್ರಾಂತ್ಯದ ಆರ್ಚ್ಬಿಷಪ್ ಜೋಸೆಫ್ ಪಂಪ್ಲಾನಿ ಆರೋಪಿಸಿದ್ದಾರೆ.

ಕರ್ನಾಟಕ ಚುನಾವಣೆಗಳಲ್ಲಿ ಬಿಜೆಪಿಯ ಸೋಲಿನ ಬಳಿಕ ಕ್ಯಾಥೊಲಿಕ್ ಚರ್ಚ್ ಆ ಪಕ್ಷಕ್ಕೆ ಬೆಂಬಲವನ್ನು ವ್ಯಕ್ತಪಡಿಸಿತ್ತು. ರಾಜ್ಯದಲ್ಲಿ ರಬ್ಬರ್ ಬೆಲೆಯನ್ನು ಪ್ರತಿ ಕೆ.ಜಿ.ಗೆ 300 ರೂ.ಗೆ ಹೆಚ್ಚಿಸುವುದಾದರೆ ತಾವು ಬಿಜೆಪಿಯನ್ನು ಬೆಂಬಲಿಸಬಹುದು ಎಂದು ಪಂಪ್ಲಾನಿ ಹೇಳಿದ್ದರು.

ಈ ಹಿಂದೆ ಮಣಿಪುರ ಹಿಂಸಾಚಾರವನ್ನು ‘ಎರಡು ಬುಡಕಟ್ಟುಗಳ ನಡುವಿನ ಘರ್ಷಣೆ ’ಎಂದು ಉಲ್ಲೇಖಿಸಿದ್ದ ಪಂಪ್ಲಾನಿ, ಅದನ್ನು ರಾಜಕೀಯ ಲಾಭಗಳಿಗಾಗಿ ಬಳಸದಂತೆ ಆಗ್ರಹಿಸಿದ್ದರು. ಆದರೆ ಅವರೀಗ ಹಿಂಸಾಚಾರವು ಸರಕಾರದಿಂದ ಪ್ರಾಯೋಜಿತವಾಗಿದೆ ಎಂದು ಆರೋಪಿಸಿದ್ದಾರೆ. ಸಶಸ್ತ್ರ ಪಡೆಗಳು ಮತ್ತು ಪೊಲೀಸರ ಸಮವಸ್ತ್ರಗಳು ದಾಳಿಕೋರರಿಗೆ ಲಭ್ಯವಾಗಿದ್ದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

‘ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವೇ ಮಣಿಪುರದಲ್ಲಿಯೂ ಆಡಳಿತವನ್ನು ನಡೆಸುತ್ತಿದೆ.

ಮಣಿಪುರದಲ್ಲಿಯ ದಾಳಿಕೋರರು ಸಶಸ್ತ್ರ ಪಡೆಗಳು ಮತ್ತು ಪೊಲೀಸರ ಸಮವಸ್ತ್ರಗಳನ್ನು ಬಳಸುತ್ತಿದ್ದಾರೆ. ಇದು ಅವರಿಗೆ ಲಭ್ಯವಾಗಿದ್ದು ಹೇಗೆ ಎನ್ನುವುದನ್ನು ನಾವು ಯೋಚಿಸಬೇಕು. ಅದು ತನಗೆ ಇಷ್ಟವಿಲ್ಲದ ಸಮುದಾಯವನ್ನು ನಾಶಗೊಳಿಸಲು ಸರಕಾರದಿಂದ ಪ್ರಾಯೋಜಿತ ಹಿಂಸಾಚಾರವೇ? ದಾಳಿಕೋರರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲು ಅಥವಾ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲು ಪ್ರಧಾನಿಯಾಗಲೀ ಯಾವುದೇ ಅಧಿಕಾರಿಗಳಾಗಲೀ ಸಿದ್ಧರಿಲ್ಲ ’ ಎಂದು ಪಂಪ್ಲಾನಿ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಭಾರತದಲ್ಲಿ ಜಾತಿ, ಜನಾಂಗ ಅಥವಾ ಧರ್ಮದ ಆಧಾರದಲ್ಲಿ ತಾರತಮ್ಯದ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಮೋದಿಯವರು ತನ್ನ ಇತ್ತೀಚಿನ ಅಮೆರಿಕ ಭೇಟಿ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಪಂಪ್ಲಾನಿ, ದಾಳಿಕೋರರಿಗೆ ಬೆಂಬಲವನ್ನು ನೀಡುವವರು ಮತ್ತು ಅವರಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುವವರು ಅಲ್ಪಸಂಖ್ಯಾತರ ರಕ್ಷಣೆಯ ಕುರಿತು ಭಾಷಣಗಳನ್ನು ಬಿಗಿದಾಗ ಅವರನ್ನು ನಂಬಲಾಗುವುದಿಲ್ಲ ಎಂದು ಹೇಳಿದರು.

ಅಲ್ಪಸಂಖ್ಯಾತರು ಇನ್ನು ಮಂದೆ ಇದನ್ನು ನಂಬುವುದಿಲ್ಲ ಎನ್ನುವ ಮೂಲಕ ಮೋದಿಯವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಆರಂಭದಲ್ಲಿ ಅದು ಎರಡು ಬುಡಕಟ್ಟುಗಳ ನಡುವಿನ ಹಿಂಸಾಚಾರವಾಗಿದೆ ಮತ್ತು ಶೀಘ್ರವೇ ಅಂತ್ಯಗೊಳ್ಳುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಬುಡಕಟ್ಟುಗಳ ನಡುವಿನ ಸಂಘರ್ಷದ ಹೆಸರಿನಲ್ಲಿ ಕ್ರೈಸ್ತರನ್ನು ನಾಶಗೊಳಿಸಲು ಯೋಜಿತ,ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದು ನಮಗೆ ನಿಧಾನವಾಗಿ ಗೊತ್ತಾಗಿದೆ.

ಈಗ ಮೈತೇಯಿ ಮತ್ತು ಕುಕಿ ಈ ಎರಡೂ ಸಮುದಾಯಗಳಲ್ಲಿನ ಕ್ರೈಸ್ತರನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ. ಹೋಲಿಸಲಾಗದ ಅನೇಕ ಕ್ರೌರ್ಯಗಳು ಮತ್ತು ಹತ್ಯೆಗಳು ನಡೆಯುತ್ತಿವೆ. 300ಕ್ಕೂ ಅಧಿಕ ಕ್ರೈಸ್ತರು ಕೊಲ್ಲಲ್ಪಟ್ಟಿದ್ದಾರೆ,500ಕ್ಕೂ ಅಧಿಕ ಚರ್ಚ್ಗಳನ್ನು ಧ್ವಂಸಗೊಳಿಸಲಾಗಿದೆ, ಇದು ಮಣಿಪುರದಲ್ಲಿ ನಡೆಯುತ್ತಿರುವ ಬೃಹತ್ ನರಮೇಧವಾಗಿದೆ ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News