ಕೇರಳ ಸಿಎಂ ಪುತ್ರಿ ಸಂಸ್ಥೆಯ ಅವ್ಯವಹಾರ ಆರೋಪದ ಕುರಿತು ತನಿಖೆಗೆ ಆದೇಶ
ಕೊಚ್ಚಿ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ. ಅವರ ಸಾಫ್ಟ್‌ವೇರ್ ಸಂಸ್ಥೆಯಿಂದ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತ ತನಿಖೆಗೆ ಕಂಪೆನಿ ಕಾಯ್ದೆಯ ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ಕೇರಳ ಉಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.
ಕಂಪೆನಿಗಳ ಕಾಯ್ದೆಯ ಸೆಕ್ಷನ್ 210 (ಕಂಪೆನಿ ವ್ಯವಹಾರಗಳ ಕುರಿತು ತನಿಖೆ) ಅಡಿಯಲ್ಲಿ ಈ ಆದೇಶಗಳನ್ನು ಹೊರಡಿಸಲಾಗಿದೆ ಹಾಗೂ ಈ ಆದೇಶವನ್ನು ಮುಂದಿನ ವಿಚಾರಣೆಯ ದಿನಾಂಕದೊಳಗೆ ದಾಖಲೆಯಲ್ಲಿ ಸಲ್ಲಿಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ.
ಈ ಪ್ರತಿಪಾದನೆಯನ್ನು ಗಮನಿಸಿದ ನ್ಯಾಯಮೂರ್ತಿ ದೇವನ್ ರಾಮಚಂದ್ರನ್, ಜಾರಿಗೊಳಿಸಲಾದ ಆದೇಶದ ದಾಖಲೆಯನ್ನು ಜನವರಿ 19ಕ್ಕಿಂತ ಮುನ್ನ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದರು ಹಾಗೂ ಪ್ರಕರಣದ ವಿಚಾರಣೆಯನ್ನು ಜನವರಿ 24ಕ್ಕೆ ಪಟ್ಟಿ ಮಾಡಿದರು.
ಅನಂತರ ನ್ಯಾಯಾಲಯ ಮುಖ್ಯಮಂತ್ರಿ, ಅವರ ಪುತ್ರಿ, ಅವರ ಸಂಸ್ಥೆ ಕೊಚ್ಚಿನ್ ಮಿನರಲ್ಸ್ ಆ್ಯಂಡ್ ರುಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಹಾಗೂ ಕೇರಳ ರಾಜ್ಯ ಕೈಗಾರಿಕೆ ಅಭಿವೃದ್ಧಿ ಕಾರ್ಪೋರೇಶನ್ ಲಿಮಿಟೆಡ್ ಸೇರಿದಂತೆ ಪ್ರತಿವಾದಿಗಳು ಕೇಂದ್ರದ ಆದೇಶಕ್ಕೆ ಪ್ರತಿಕ್ರಿಯಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ಹೇಳಿತು.