ಕೇರಳ: ಹಿಂಸಾಚಾರಕ್ಕೆ ತಿರುಗಿದ ಕಾಂಗ್ರೆಸ್‌ನ ಪ್ರತಿಭಟನಾ ರ್‍ಯಾಲಿ
ತಿರುವನಂತಪುರ: ಪ್ರತಿಪಕ್ಷ ಕಾಂಗ್ರೆಸ್ ಶನಿವಾರ ಇಲ್ಲಿನ ಕೇರಳ ಡಿಜಿಪಿ ಕಚೇರಿಗೆ ನಡೆಸಿದ ಪ್ರತಿಭಟನಾ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲ ಪಿರಂಗಿ ಹಾಗೂ ಅಶ್ರುವಾಯು ಸೆಲ್‌ಗಳನ್ನು ಪ್ರಯೋಗಿಸಿದರು.
ಎಡಪಂಥೀಯ ಸರಕಾರದ ‘ನವ ಕೇರಳ ಸದಸ್’ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸಂದರ್ಭ ತಮ್ಮ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಈ ರ್ಯಾಲಿ ಆಯೋಜಿಸಿತ್ತು.
ಪೊಲೀಸರು ಅಶ್ರುವಾಯು ಹಾಗೂ ಜಲ ಪಿರಂಗಿಗಳನ್ನು ಬಳಸಿದ ಸಂದರ್ಭ ಡಿಜಿಪಿ ಕಚೇರಿಯ ಸಮೀಪ ನಿರ್ಮಿಸಲಾಗಿದ್ದ ತಾತ್ಕಾಲಿಕ ವೇದಿಕೆಯಲ್ಲಿ ಕೆಪಿಸಿಸಿ ವರಿಷ್ಠ ಸುದರ್ಶನ್, ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕ ವಿ.ಡಿ. ಸತೀಶನ್, ಹಿರಿಯ ನಾಯಕ ರಮೇಶ್ ಚೆನ್ನಿತ್ತಾಲ, ತಿರುವನಂತಪುರದ ಸಂಸದ ಶಶಿ ತರೂರ್ ಹಾಗೂ ಇತರು ಉಪಸ್ಥಿತರಿದ್ದರು.
ಪೊಲೀಸರು ಪ್ರಯೋಗಿಸಿದ ಅಶ್ರುವಾಯುವಿನಿಂದ ಸುಧಾಕರನ್ ಹಾಗೂ ಚೆನ್ನಿತ್ತಾಲ್ ಅವರ ಕಣ್ಣಿನ ದೃಷ್ಟಿಗೆ ಹಾನಿ ಉಂಟಾಯಿತು. ಕಾಂಗ್ರೆಸ್ ಕಾರ್ಯಕರ್ತರು ಕೂಡಲೇ ಅವರನ್ನು ಕಾರಿನಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದರು.
ಆಸ್ಪತ್ರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸುಧಾಕರನ್, ಪಕ್ಷದ ನಾಯಕರ ವಿರುದ್ಧ ಇದುವರೆಗೆ ಇಂತಹ ದಾಳಿ ಹಿಂದೆ ನಡೆದಿಲ್ಲ ಎಂದು ಹೇಳಿದ್ದಾರೆ. ‘‘ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಹಿರಿಯ ನಾಯಕರು ಉಪಸ್ಥಿತರಿದ್ದ ಸಂದರ್ಭ ಪೊಲೀಸರ ನಡುವೆ ಇದ್ದ ಗೂಂಡಾಗಳು ಯಾವುದೇ ಪ್ರಚೋದನೆ ಇಲ್ಲದೆ ನಮ್ಮ ಮೇಲೆ ದಾಳಿ ನಡೆಸಿದರು’’ ಎಂದು ಅವರು ತಿಳಿಸಿದ್ದಾರೆ.
ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ ಸತೀಶನ್, ಕಾಂಗ್ರೆಸ್ ನಾಯಕರ ಮೇಲೆ ಇಂತಹ ದಾಳಿ ನಡೆಯುತ್ತಿರುವುದು ಕೇರಳದ ಇತಿಹಾಸದಲ್ಲೇ ಪ್ರಥಮ ಎಂದರು. ‘‘ಕಾಂಗ್ರೆಸ್ ನಾಯಕರಿಗೆ ಹಾನಿ ಉಂಟು ಮಾಡಲು ಮುಖ್ಯಮಂತ್ರಿ ಅವರ ನಿರ್ದೇಶನದಂತೆ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ವರಿಷ್ಠರು ಕೇರಳದ ಭದ್ರತೆಯ ಉಸ್ತುವಾರಿಯನ್ನು ಆಡಳಿತಾರೂಢ ಸಿಪಿಐ (ಎಂ)ಗೆ ವರ್ಗಾಯಿಸಿದ್ದಾರೆ. ಪೊಲೀಸ್ ಪಡೆಯನ್ನು ಮುಖ್ಯಮಂತ್ರಿ ಕಚೇರಿಯ ನಿರ್ದಿಷ್ಟ ವ್ಯಕ್ತಿಗಳು ನಿಯಂತ್ರಿಸುತ್ತಿದ್ದಾರೆ’’ ಎಂದು ಸತೀಶನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಕ್ಷದ ಕನಿಷ್ಠ 6 ಮಂದಿ ಸಂಸದರು ಹಾಗೂ ಹಲವು ನಾಯಕರು ಉಪಸ್ಥಿತರಿದ್ದ ವೇದಿಕೆಯ ಹಿಂದೆ ಅಶ್ರುವಾಯು ಸೆಲ್‌ಗಳನ್ನು ಸಿಡಿಸಲಾಗಿದೆ ಎಂದು ತಿರುವನಂತಪುರದ ಸಂಸದ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರು ಹೇಳಿದ್ದಾರೆ.
‘‘ಯಾರ ನಿರ್ದೇಶನದ ಮೇರೆಗೆ ಪಕ್ಷದ ನಾಯಕರ ಮೇಲೆ ದಾಳಿ ನಡೆಸಲಾಯಿತು ಎಂದು ನಾವು ತಿಳಿಯಲು ಬಯಸುತ್ತೇವೆ. ಈ ದೇಶದಲ್ಲಿ ಪ್ರತಿಭಟನೆ ನಡೆಸಲು ನಮಗೆ ಹಕ್ಕಿದೆ. ಚುನಾಯಿತ ಪ್ರತಿನಿಧಿಗಳ ಮೇಲಿನ ಈ ದಾಳಿಯ ವಿರುದ್ಧ ಸಂಸದರು ಹಾಗೂ ಶಾಸಕರು ಸಂಬಂಧಿತ ಹಕ್ಕು ಬಾಧ್ಯತಾ ಸಮಿತಿಯನ್ನು ಸಂಪರ್ಕಿಸಲಿದ್ದಾರೆ’’ ಎಂದು ಶಶಿ ತರೂರ್ ಹೇಳಿದ್ದಾರೆ