ಮಾನವ-ಪ್ರಾಣಿ ನಡುವಿನ ಸಂಘರ್ಷವನ್ನು ಚಿತ್ರೀಕರಿಸುತ್ತಿದ್ದ ಕೇರಳದ ಪತ್ರಕರ್ತನನ್ನು ತುಳಿದು ಕೊಂದ ಆನೆ
ಪಾಲಕ್ಕಾಡ್ (ಕೇರಳ): ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆನೆಯ ಉಪಟಳವನ್ನು ಚಿತ್ರೀಕರಿಸುತ್ತಿದ್ದ ತಂಡದ ಭಾಗವಾಗಿದ್ದ ಮಾತೃಭೂಮಿ ನ್ಯೂಸ್ ಮಲಯಾಳಂ ಸುದ್ದಿ ವಾಹಿನಿಯ ಛಾಯಾಗ್ರಾಹಕ ಹಾಗೂ ಅಂಕಣಕಾರನನ್ನು ಆನೆಯೊಂದು ತುಳಿದು ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಪತ್ರಕರ್ತನನ್ನು ಮಾತೃಭೂಮಿ ನ್ಯೂಸ್ ಸುದ್ದಿ ವಾಹಿನಿಯ ಪಾಲಕ್ಕಾಡ್ ಬ್ಯೂರೊದ ಎ.ವಿ.ಮುಕೇಶ್ (34) ಎಂದು ಗುರುತಿಸಲಾಗಿದೆ.
ಆನೆಗಳ ಹಿಂಡೊಂದು ಪಾಲಕ್ಕಾಡ್ ಜಿಲ್ಲೆಯ ಕೊಟ್ಟೆಕ್ಕಾಡ್ ಗ್ರಾಮದಲ್ಲಿ ಕಾಣಿಸಿಕೊಂಡಿದೆ ಎಂಬ ಮಾಹಿತಿಯನ್ನು ಆಧರಿಸಿ, ಆ ಸುದ್ದಿಯನ್ನು ವರದಿ ಮಾಡಲು ಇಂದು ಬೆಳಗ್ಗೆ ಮುಕೇಶ್ ಹಾಗೂ ಅವರ ತಂಡವು ಕೊಟ್ಟೆಕ್ಕಾಡ್ ಗ್ರಾಮಕ್ಕೆ ಆಗಮಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, “ಆನೆಗಳು ನದಿಯನ್ನು ದಾಟುತ್ತಿರುವ ದೃಶ್ಯಾವಳಿಗಳನ್ನು ಸುದ್ದಿ ತಂಡವು ಚಿತ್ರೀಕರಿಸುತ್ತಿದ್ದಾಗ, ಹಿಂಡಿನಲ್ಲಿದ್ದ ಆನೆಯೊಂದು ತಂಡದ ಕಡೆ ದಾಳಿ ಇಟ್ಟಿತು. ಆನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ನೆಲಕ್ಕೆ ಬಿದ್ದ ಮುಕೇಶ್ ನನ್ನು ಆನೆಯು ತುಳಿದು ಹಾಕಿತು” ಎಂದು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮುಕೇಶ್ ರನ್ನು ತಕ್ಷಣವೇ ಪಾಲಕ್ಕಾಡ್ ನ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತಾದರೂ, ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಮೂಲಗಳ ಪ್ರಕಾರ, ಕೊಟ್ಟೆಕ್ಕಾಡ್ ಗ್ರಾಮದಲ್ಲಿರುವ ಜನವಸತಿ ಪ್ರದೇಶಗಳಿಗೆ ಪದೇ ಪದೇ ನುಗ್ಗುವ ಆನೆಗಳು ಬೆಳೆಯನ್ನು ನಾಶಪಡಿಸುವ ಮೂಲಕ ಸ್ಥಳೀಯರಲ್ಲಿ ಭೀತಿ ಹುಟ್ಟಿಸುತ್ತಿವೆ ಎಂದು ಹೇಳಲಾಗಿದೆ.
ಕಳೆದ ವರ್ಷ ಪಾಲಕ್ಕಾಡ್ ಗೆ ವರ್ಗಾವಣೆಯಾಗುವುದಕ್ಕೂ ಮುನ್ನ, ಮಾತೃಭೂಮಿ ನ್ಯೂಸ್ ಸುದ್ದಿ ವಾಹಿನಿಗಾಗಿ ಮುಕೇಶ್ ದಿಲ್ಲಿಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. mathrubhumi.comನಲ್ಲಿ ‘ಅತಿಜೀವಿತಂ’ ಎಂಬ ಅಂಕಣವನ್ನು ಬರೆಯುತ್ತಿದ್ದ ಮುಕೇಶ್, ಜೀವನದ ವಿವಿಧ ನಡಿಗೆಗಳಲ್ಲಿ ಬದುಕುಳಿದಿರುವ ವ್ಯಕ್ತಿಗಳ ಕುರಿತು, ವಿಶೇಷವಾಗಿ ಸಮಾಜದ ಅಂಚಿನ ವರ್ಗಗಳ ಕುರಿತ ಲೇಖನಗಳನ್ನು ಬರೆಯುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಮುಕೇಶ್ ಈ ಅಂಕಣದಲ್ಲಿ 110 ಲೇಖನಗಳನ್ನು ಬರೆದಿದ್ದರು.
ಮುಕೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಸಂತಾಪ ವ್ಯಕ್ತಪಡಿಸಿದ್ದಾರೆ.