ಕೇರಳ | ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಯ ಮೇಲೆ 29 ಗಂಟೆಗಳ ಕಾಲ ನಿರಂತರವಾಗಿ ಹಲ್ಲೆ ನಡೆಸಲಾಗಿತ್ತು: ವರದಿ

Update: 2024-04-07 09:53 GMT

Photo: ndtv

ಹೊಸದಿಲ್ಲಿ: ಕೇರಳದ ವಯನಾಡ್ ಜಿಲ್ಲೆಯ ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿ ನಿಲಯವೊಂದರಲ್ಲಿ ಮೃತಪಟ್ಟಿದ್ದ 20 ವರ್ಷದ ಪಶು ವೈದ್ಯಕೀಯ ಪದವಿ ವಿದ್ಯಾರ್ಥಿಯ ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ) ಕೈಗೆತ್ತಿಕೊಂಡಿದೆ.

ಮೃತ ವಿದ್ಯಾರ್ಥಿ ಸಿದ್ಧಾರ್ಥನ್ ಜೆ.ಎಸ್. ಮೃತದೇಹವು ವಿದ್ಯಾರ್ಥಿ ನಿಲಯದ ಸ್ನಾನದ ಕೋಣೆಯಲ್ಲಿ ಫೆಬ್ರವರಿ 18ರಂದು ಪತ್ತೆಯಾಗಿತ್ತು. ಸಿಪಿಐಎಂ ಪಕ್ಷದ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ ಎಫ್ ಐ) ಹೋರಾಟಗಾರರು ಸೇರಿದಂತೆ ಇತರ ವಿದ್ಯಾರ್ಥಿಗಳಿಂದ ತಮ್ಮ ಪುತ್ರನು ರ‍್ಯಾಗಿಂಗ್ ಗೆ ಒಳಗಾಗಿದ್ದ ಎಂದು ಸಿದ್ಧಾರ್ಥನ್ ಕುಟುಂಬದ ಸದಸ್ಯರು ಆರೋಪಿಸಿದ್ದರು.

ಕೇಂದ್ರ ತನಿಖಾ ದಳಕ್ಕೆ ಕೇರಳ ಪೊಲೀಸರು ಹಸ್ತಾಂತರಿಸಿರುವ ಆತ್ಮಹತ್ಯೆ ಪ್ರಚೋದನೆ ಪ್ರಕರಣದ ಕಡತದಲ್ಲಿ ಸಿದ್ಧಾರ್ಥನ್ ಮೇಲೆ ಸಹಪಾಠಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ನಿರಂತರವಾಗಿ 29 ಗಂಟೆಗಳ ಕಾಲ ಹಲ್ಲೆ ನಡೆಸಿದ್ದರು ಎಂದು ಹೇಳಿದ್ದಾರೆ ಎಂದು The Indian Express ದಿನಪತ್ರಿಕೆ ವರದಿ ಮಾಡಿದೆ. ವಿತ್ರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರಶೋಭ್ ಪಿ.ವಿ., ಸಿದ್ಧಾರ್ಥನ್ ನನ್ನು ಹಿರಿಯ ವಿದ್ಯಾರ್ಥಿಗಳು ಹಾಗೂ ಸಹಪಾಠಿಗಳು ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಗುರಿ ಮಾಡಿದ್ದಾರೆ. ಇದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಮ್ಮ ಟಿಪ್ಪಣಿಯಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ.

ವಯನಾಡ್ ನ ವಿತ್ರಿ ಪೊಲೀಸ್ ಠಾಣೆಯಲ್ಲಿ 20 ಮಂದಿ ವಿರುದ್ಧ ದಾಖಲಾಗಿದ್ದ ಪ್ರಕರಣದ ಕುರಿತು ಕೇಂದ್ರ ಸರಕಾರದಿಂದ ಅಧಿಸೂಚನೆ ಹೊರಬಿದ್ದ ನಾಲ್ಕು ಗಂಟೆಗಳೊಳಗೆ ಶುಕ್ರವಾರ ರಾತ್ರಿ ಕೇಂದ್ರ ತನಿಖಾ ದಳವು ಮತ್ತೊಮ್ಮೆ FIR ದಾಖಲಿಸಿಕೊಂಡಿದೆ. ರಾಜ್ಯ ಶಿಫಾರಸು ಮಾಡುವ ಪ್ರಕರಣಗಳಲ್ಲಿ ಕೇಂದ್ರ ತನಿಖಾ ತಂಡವು ಇನ್ನೊಮ್ಮೆ FIR ದಾಖಲಿಸಿಕೊಳ್ಳುವುದು ತನಿಖಾ ವಿಧಾನವಾಗಿದೆ.

ಈ ಪ್ರಕರಣದ ಕುರಿತು ರಾಜಕೀಯ ವಿವಾದ ಸೃಷ್ಟಿಯಾದ ನಂತರ ಮಾರ್ಚ್ 9ರಂದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ನೀಡಿದ್ದರು. ಸಿಬಿಐ ತನಿಖೆಯ ಭರವಸೆ ನೀಡಿ ಒಂದು ವಾರ ಕಳೆದರೂ, ಪ್ರಕರಣದ ಪ್ರಮುಖ ಕಡತಗಳನ್ನು ರಾಜ್ಯ ಸರಕಾರವು ಇನ್ನೂ ಸಿಬಿಐಗೆ ಹಸ್ತಾಂತರಿಸಿಲ್ಲ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಆರೋಪಿಸಿದ್ದರಿಂದ ಈ ಪ್ರಕರಣವು ಭಾರಿ ವಿವಾದದ ಸ್ವರೂಪಕ್ಕೆ ತಿರುಗಿತ್ತು.

ಇದಲ್ಲದೆ ಮೃತ ವಿದ್ಯಾರ್ಥಿಯ ಕುಟುಂಬದ ಸದಸ್ಯರೂ ಪ್ರಕರಣದ ಕಡತಗಳನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಲು ರಾಜ್ಯ ಸರಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದು, ಸಾಕ್ಷ್ಯಾಧಾರಗಳನ್ನು ನಾಶಗೊಳಿಸಿದೆ ಎಂದು ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News