ವಿದ್ಯಾರ್ಥಿ ನಾಯಕನ ಅಪಹರಣ: ಬಿಜೆಪಿ ಶಾಸಕಿಯ ಪುತ್ರನ ವಿರುದ್ಧ ಪ್ರಕರಣ ದಾಖಲು
ಜುನಾಗಢ (ಗುಜರಾತ್): ಸ್ಥಳೀಯ NSUI ನಾಯಕನೊಬ್ಬನನ್ನು ಅಪಹರಿಸಿ, ಆತನನ್ನು ಥಳಿಸಿದ ಆರೋಪದಲ್ಲಿ ಬಿಜೆಪಿ ಶಾಸಕಿ ಗೀತಾಬಾ ಜಡೇಜಾರ ಪುತ್ರ ಗಣೇಶ್ ಜಡೇಜಾ ಹಾಗೂ ಇನ್ನಿತರರ ವಿರುದ್ಧ ಹತ್ಯೆ ಯತ್ನ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾದ NSUIನ ನಗರ ಘಟಕದ ಮುಖ್ಯಸ್ಥರಾದ ದೂರುದಾರ ಸಂಜಯ್ ಸೋಳಂಕಿ ದಲಿತ ಸಮುದಾಯದವರೂ ಆಗಿರುವುದರಿಂದ, ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ನೂ ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜುನಾಗಢ ಎ ವಲಯ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿ.ಜೆ.ಸಾವಜ್, “ಈ ಘಟನೆಯು ಶುಕ್ರವಾರ ಮುಂಜಾನೆ ನಡೆದಿದೆ. ನಾವು ಗಣೇಶ್ ಜಡೇಜಾ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆದರೆ, ಈವರೆಗೆ ಯಾರನ್ನೂ ಬಂಧಿಸಿಲ್ಲ” ಎಂದು ತಿಳಿಸಿದ್ದಾರೆ.
ಕ್ಷುಲ್ಲಕ ಜಗಳದ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಆರೋಪಿಗಳಾದ ಗಣೇಶ್ ಜಡೇಜಾ ಹಾಗೂ ಆತನ ಸಹಚರರು ಶುಕ್ರವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಸಂಜಯ್ ಸೋಳಂಕಿಯನ್ನು ಹಿಂಬಾಲಿಸಿದ್ದು, ಅವರ ಬೈಕ್ ಗೆ ಹಿಂಬದಿಯಿಂದ ಗುದ್ದಿದ್ದಾರೆ. ಸೋಳಂಕಿ ಬೈಕ್ ನಿಂದ ಕೆಳಕ್ಕೆ ಬಿದ್ದಾಗ, ತಮ್ಮ ಬೈಕ್ ನಿಂದ ಕೆಳಗಿಳಿದಿರುವ ಆರೋಪಿಗಳು ಸೋಳಂಕಿಯನ್ನು ದೊಣ್ಣೆಗಳಿಂದ ಥಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿ ಗಣೇಶ್ ಜಡೇಜಾರ ತಾಯಿ ಗೀತಾಬಾ ಜಡೇಜಾ ಅವರು ರಾಜ್ ಕೋಟ್ ಜಿಲ್ಲೆಯ ಗೊಂಡಾಲ್ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದಾರೆ.