ಆಂಧ್ರಪ್ರದೇಶದಲ್ಲಿ ಎನ್ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿಯ ಹತ್ಯೆ
ಅಮರಾವತಿ: ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾದ ಎನ್ಎಸ್‌ಯುಐ ನ ರಾಷ್ಟ್ರೀಯ ಕಾರ್ಯದರ್ಶಿ ಬಿ.ಸಂಪತ್ ಕುಮಾರ್ ಹತ್ಯೆಗೀಡಾಗಿರುವ ಸ್ಥಿತಿಯಲ್ಲಿ ಗುರುವಾರ ಶ್ರೀ ಸತ್ಯ ಸಾಯಿ ಜಿಲ್ಲೆಯ ಧರ್ಮಾವರಂ ಬಳಿಯ ಕೃಷಿ ಹೊಂಡದ ಬಳಿ ಪತ್ತೆಯಾಗಿದ್ದಾರೆ.
ಈ ಕುರಿತು ಸ್ಥಳೀಯ ಗ್ರಾಮಸ್ಥರು ಪೊಲೀಸರ ಗಮನಕ್ಕೆ ತಂದ ನಂತರ, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿರುವ ಪೊಲೀಸರು, ಬಿ.ಸಂಪತ್ ಕುಮಾರ್ ಅವರನ್ನು ಬೇರೆಡೆ ಹತ್ಯೆಗೈದು ಧರ್ಮಾವರಂ ಕೃಷಿ ಹೊಂಡದ ಬಳಿಯಲ್ಲಿನ ಪೊದೆಯಲ್ಲಿ ಎಸೆದಿರಬಹುದು ಎಂದು ಶಂಕಿಸಿದ್ದಾರೆ. ಇದರೊಂದಿಗೆ ಅನಂತಪುರಂ ಪಟ್ಟಣದಿಂದ ಧರ್ಮಾವರಂಗೆ ಅವರ ಮೃತದೇಹವನ್ನು ತಂದಿರುವ ವಾಹನದ ನೋಂದಣಿ ಸಂಖ್ಯೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಧರ್ಮಾವರಂ ಮಂಡಲದ ಯರ್ರಗುಂಟಪಲ್ಲಿಯ ನಿವಾಸಿಯಾದ ಸಂಪತ್ ಕುಮಾರ್, ಹಿಂದೂಪುರದಲ್ಲಿ ವಕೀಲಿಕೆ ವೃತ್ತಿ ಮಾಡುತ್ತಿದ್ದರು. ಇದರೊಂದಿಗೆ ಎನ್ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಅವರು, ಕೇರಳ ಪ್ರಾಂತ್ಯದ ಉಸ್ತುವಾರಿಯೂ ಆಗಿದ್ದರು. ಅವರು ಕೆಲವು ವ್ಯಕ್ತಿಗಳೊಂದಿಗೆ ಭೂವಿವಾದ ಹೊಂದಿದ್ದರು ಎಂದು ಹೇಳಲಾಗಿದ್ದು, ಅವರು ಇತ್ತೀಚೆಗೆ ತನಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ದೂರನ್ನೂ ನೀಡಿದ್ದರು ಎಂದು ವರದಿಯಾಗಿದೆ. ಇದರೊಂದಿಗೆ ಬೇರೆ ಇನ್ನಾವುದಾದರೂ ಕಾರಣಕ್ಕೆ ಅವರ ಹತ್ಯೆ ನಡೆದಿರಬಹುದೇ ಎಂಬುದರತ್ತಲೂ ಪೊಲೀಸರು ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ.
ಸಂಪತ್ ಕುಮಾರ್ ಕೇರಳ ವಿದ್ಯಾರ್ಥಿ ಸಂಘಟನೆಯ ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬುಧವಾರ ಕೇರಳಕ್ಕೆ ತೆರಳಬೇಕಿತ್ತು. ಅವರು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸಂಪತ್ ಕುಮಾರ್ ಅವರ ಹತ್ಯೆಯನ್ನು ಖಂಡಿಸಿರುವ ಕಾಂಗ್ರೆಸ್, ದುಷ್ಕರ್ಮಿಗಳ ವಿರುದ್ಧ ಶೀಘ್ರವೇ ಪ್ರಕರಣ ದಾಖಲಾಗಬೇಕು ಎಂದು ಆಗ್ರಹಿಸಿದೆ.