ಕೊಚ್ಚರ್ ದಂಪತಿ ವಂಚನೆ ಪ್ರಕರಣ: ಪುನರಪಿ ಜಾಮೀನು ವಿಸ್ತರಣೆ ಕುರಿತು ಸಿಬಿಐಗೆ ಸುಪ್ರೀಂ ಕೋರ್ಟ್ ತರಾಟೆ
Update: 2023-10-10 16:22 GMT
ಹೊಸದಿಲ್ಲಿ: ಸಾಲ ವಂಚನೆ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್ ಮತ್ತು ಅವರ ಉದ್ಯಮಿ ಪತಿ ದೀಪಕ ಕೊಚ್ಚರ್ ಅವರಿಗೆ ಈ ವರ್ಷದ ಜನವರಿಯಲ್ಲಿ ಬಾಂಬೆ ಉಚ್ಚ ನ್ಯಾಯಾಲಯವು ನೀಡಿದ್ದ ಎರಡು ವಾರಗಳ ಮಧ್ಯಂತರ ಜಾಮೀನಿನ ಪುನರಾವರ್ತಿತ ವಿಸ್ತರಣೆಯನ್ನು ಆಕ್ಷೇಪಿಸದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಸಿಬಿಐ ಅನ್ನು ಪ್ರಶ್ನಿಸಿತು.
ಜ.9ರಂದು ಕೇವಲ ಎರಡು ವಾರಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. ಪುನರಾವರ್ತಿತ ವಿಸ್ತರಣೆಯನ್ನು ನೀವೇಕೆ ವಿರೋಧಿಸಿರಲಿಲ್ಲ? ಇಷ್ಟೊಂದು ಸುದೀರ್ಘ ಸಮಯ ಅದು ಮುಂದುವರಿಯಲು ನೀವೇಕೆ ಅನುಮತಿಸುತ್ತಿದ್ದೀರಿ? ನೀವು ಉಚ್ಚ ನ್ಯಾಯಾಲಯದಲ್ಲಿ ಆಕ್ಷೇಪವನ್ನು ಸಲ್ಲಿಸಬೇಕಿತ್ತು ಎಂದು ಪೀಠವು ಸಿಬಿಐ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರಿಗೆ ಹೇಳಿತು.
ಹೈಕೋರ್ಟ್ ನಲ್ಲಿ ಮುಂದಿನ ವಿಚಾರಣೆಯ ದಿನಾಂಕವನ್ನು ಇನ್ನೂ ಪ್ರಕಟಿಸಲಾಗಿಲ್ಲ ಎಂದು ತಿಳಿಸಿದ ರಾಜು, ಮಧ್ಯಂತರ ಜಾಮೀನಿನ ವಿಷಯದಲ್ಲಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಮುಂಬೈನಲ್ಲಿರುವ ತನ್ನ ಸಹೋದ್ಯೋಗಿಗೆ ಸೂಚಿಸುವುದಾಗಿ ಹೇಳಿದರು.
ಉಚ್ಚ ನ್ಯಾಯಾಲಯದ ಜ.9ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಿಬಿಐ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಅ.16ಕ್ಕೆ ಮುಂದೂಡಿತು ಮತ್ತು ಅಗತ್ಯ ಕ್ರಮಗಳ ಬಗ್ಗೆ ಸಲಹೆಗಳನ್ನು ಪಡೆದುಕೊಳ್ಳುವಂತೆ ರಾಜು ಅವರಿಗೆ ಸೂಚಿಸಿತು.