“ಕೆಲವರು ರೈಲಿನಲ್ಲಿ ಹೋಳಿ ಆಡಿದರೆ, ಕೆಲವರು ಜೈಲಿನಲ್ಲಿ ಹೋಳಿ ಆಡುತ್ತಾರೆ” ಎಂದು ಕೇಜ್ರಿವಾಲ್ ರನ್ನು ಛೇಡಿಸಿದ ಬಿಜೆಪಿ ಸಂಸದ ಮನೋಜ್ ತಿವಾರಿ
ಹೊಸದಿಲ್ಲಿ : ಬಿಜೆಪಿ ಸಂಸದ ಮನೋಜ್ ತಿವಾರಿ ಸೋಮವಾರ ದಿಲ್ಲಿಯ ತಮ್ಮ ನಿವಾಸದಲ್ಲಿ ತಮ್ಮ ಬೆಂಬಲಿಗರೊಂದಿಗೆ ಹೋಳಿ ಆಚರಿಸಿದರು. ಈ ಸಂದರ್ಭದಲ್ಲಿ, ತಿವಾರಿ ಅವರು "ಬುರಾ ನಾ ಮನೋ ಹೋಲಿ ಹೈ"(ತಪ್ಪು ತಿಳಿಯಬೇಡಿ, ಹೋಳಿ ಹಬ್ಬ) ಎಂಬ ಹಾಡಿನ ಮೂಲಕ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಛೇಡಿಸಿದ ಘಟನೆ ವರದಿಯಾಗಿದೆ.
"ಕೋಯಿ ಖೇಲೆ ರೈಲ್ ಮೇ, ಕೋಯಿ ಖೇಲೆ ಜೈಲ್ ಮೇ” (ಕೆಲವರು ರೈಲಿನಲ್ಲಿ ಹೋಳಿ ಆಡಿದರೆ, ಕೆಲವರು ಜೈಲಿನಲ್ಲಿ ಹೋಳಿ ಆಡುತ್ತಾರೆ) ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ತಮ್ಮ ಬೆಂಬಲಿಗರ ಜೋರಾದ ಹರ್ಷೋದ್ಗಾರಗಳ ನಡುವೆ ಹಾಡಿದ್ದಾರೆ ಎಂದು thestatesman.com ವರದಿ ಮಾಡಿದೆ.
ದಿಲ್ಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಯಿಂದ ಎಎಪಿ ಮುಖ್ಯಸ್ಥರೂ ಆಗಿರುವ ಅರವಿಂದ್ ಕೇಜ್ರಿವಾಲ್ ಬಂಧಿಸಿದ ನಂತರ ಸಂಸದ ಮನೋಜ್ ತಿವಾರಿ ಅವರು ಹೋಳಿ ಹಬ್ಬದ ಆಚರಣೆ ಸಂದರ್ಭ ಅರವಿಂದ್ ಕೇಜ್ರಿವಾಲ್ ಕುರಿತು, ಈ ರೀತಿ ಹಾಡಿದ್ದಾರೆ.
ಕೇಜ್ರಿವಾಲ್ ರಾಜೀನಾಮೆ ನೀಡುವುದಿಲ್ಲ ಮತ್ತು ಜೈಲಿನೊಳಗಿಂದ ಸರ್ಕಾರವನ್ನು ನಡೆಸುತ್ತಾರೆ ಎಂದು ಅವರ ಪಕ್ಷ ಘೋಷಿಸಿದ್ದಕ್ಕೆ ಕಳೆದ ವಾರ ಬಿಜೆಪಿ ಸಂಸದ ಮನೋಜ್ ತಿವಾರಿ, ಆಮ್ ಆದ್ಮಿ ಪಕ್ಷವನ್ನು ಕಟುವಾಗಿ ಟೀಕಿಸಿದ್ದರು."ಜೈಲಿನಿಂದ ಸರ್ಕಾರವನ್ನು ನಡೆಸುತ್ತೇವೆ ಎಂದು ಪದೇ ಪದೇ ಹೇಳುತ್ತಿರುವವರು, ನೆನಪಿಟ್ಟುಕೊಳ್ಳಿ. ನಾವು ಜೈಲಿನಿಂದ ಗ್ಯಾಂಗ್‌ಗಳನ್ನು ನಡೆಸುವುದನ್ನು ನೋಡಿದ್ದೇವೆ ಮತ್ತು ಸರ್ಕಾರವನ್ನಲ್ಲ" ಎಂದಿದ್ದರು.
ಕೇಜ್ರಿವಾಲ್ ದಿಲ್ಲಿಯನ್ನು ಲೂಟಿ ಮಾಡಿದ್ದಾರೆ. ಅವರ ಬಂಧನದ ನಂತರ ರಾಷ್ಟ್ರ ರಾಜಧಾನಿಯ ಜನರು ಸಿಹಿ ಹಂಚಿದರು ಎಂದು ತಿವಾರಿ ಆರೋಪಿಸಿದರು.
ದಿಲ್ಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಕಳೆದ ಗುರುವಾರ ರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿತು. ರೋಸ್ ಅವೆನ್ಯೂ ನ್ಯಾಯಾಲಯವು ಕೇಜ್ರಿವಾಲ್ ರನ್ನು ಮಾರ್ಚ್ 28 ರವರೆಗೆ ಈಡಿ ಕಸ್ಟಡಿಗೆ ಕಳುಹಿಸಿದೆ.