ಕೋಲ್ಕತ್ತಾ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಹಣಕಾಸಿನ ಅವ್ಯವಹಾರ ಆರೋಪ: ಹಲವು ಕಡೆ ಈಡಿಯಿಂದ ಶೋಧ
ಕೋಲ್ಕತ್ತಾ: ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಹಣಕಾಸಿನ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಈಡಿ) ಪಶ್ಚಿಮ ಬಂಗಾಳದ ಹೌರಾ, ಸೋನಾರ್‌ಪುರ ಮತ್ತು ಹೂಗ್ಲಿಯ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದೆ.
ಇದೇ ಆಗಸ್ಟ್ ನಲ್ಲಿ ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿತ್ತು. ಪ್ರಕರಣ ದೇಶದಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಮೂಲಗಳ ಪ್ರಕಾರ, ಕೇಂದ್ರೀಯ ತನಿಖಾಧಿಕಾರಿಗಳು ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರಿಗೆ ಸೇರಿದ ಹೂಗ್ಲಿಯಲ್ಲಿನ ಸ್ಥಳದ ಮೇಲೆ ಕೂಡ ದಾಳಿಯನ್ನು ನಡೆಸಿದ್ದಾರೆ.
ಕಳೆದ ವಾರ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಆರ್ಥಿಕ ಅವ್ಯವಹಾರಗಳ ಬಗ್ಗೆ ಈಡಿ ಪ್ರಕರಣ ದಾಖಲಿಸಿದೆ. ಸಿಬಿಐ ಎಫ್‌ಐಆರ್ ಆಧಾರದ ಮೇಲೆ ಈ ಕುರಿತು ಈಡಿ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಎಫ್‌ಐಆರ್‌ನಲ್ಲಿ, ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಜೊತೆಗೆ ಕ್ರಿಮಿನಲ್ ಪಿತೂರಿ, ವಂಚನೆ ಸೇರಿದಂತೆ ವಿವಿಧ ಸೆಕ್ಸನ್ ಗಳನ್ನು ಸೇರಿಸಲಾಗಿತ್ತು.
2021ರ ಫೆಬ್ರವರಿಯಲ್ಲಿ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿ ಸೇವೆಯನ್ನು ಆರಂಭಿಸಿದ್ದ ಡಾ. ಘೋಷ್ ಅವರನ್ನು ಸೆ. 2023ರಲ್ಲಿ ವರ್ಗಾವಣೆ ಮಾಡಲಾಗಿತ್ತು. ಆದರೆ ಅವರು ವೈದ್ಯೆಯ ಕ್ರೂರ ಅತ್ಯಾಚಾರ ಮತ್ತು ಹತ್ಯೆಯ ದಿನದವರೆಗೂ ತಮ್ಮ ಕರ್ತವ್ಯದಲ್ಲಿ ಮುಂದುವರಿದಿದ್ದರು. ಸೆ. 2ರಂದು ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಸಂದೀಪ್ ಘೋಷ್ ಅವರನ್ನು ಬಂಧಿಸಲಾಗಿತ್ತು.