2023ರಲ್ಲಿ 22 ವಿದ್ಯಾರ್ಥಿಗಳು ಆತ್ಮಹತ್ಯೆ; ಸ್ಪ್ರಿಂಗ್ ಭರಿತ ಫ್ಯಾನ್ ಅಳವಡಿಸಿದ ಕೋಟಾ ಆಡಳಿತ ಮಂಡಳಿ
ಹೊಸದಿಲ್ಲಿ: ರಾಜಸ್ಥಾನದ ಕೋಟಾದಲ್ಲಿ ಭಾರತೀಯ ತಂತ್ರಜ್ಞಾನ ಜಂಟಿ ಪ್ರವೇಶ ಪರೀಕ್ಷೆ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 18 ವರ್ಷದ ವಿದ್ಯಾರ್ಥಿಯು ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023ರ ಅವಧಿಯಲ್ಲಿ ಕೋಟಾದಲ್ಲಿ ನಡೆದಿರುವ 22ನೇ ಆತ್ಮಹತ್ಯೆ ಪ್ರಕರಣ ಇದಾಗಿದ್ದು, ಆಗಸ್ಟ್ ತಿಂಗಳೊಂದರಲ್ಲೇ ಇದು ನಾಲ್ಕನೆ ಆತ್ಮಹತ್ಯೆ ಪ್ರಕರಣವಾಗಿದೆ.
ಜಂಟಿ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರಗಳ ತಾಣವಾಗಿರುವ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ತೀವ್ರ ಮಾನಸಿಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ಹಲವಾರು ಮಂದಿ ಬೊಟ್ಟು ಮಾಡುತ್ತಿದ್ದಾರೆ. ಆದರೆ, ಕೋಟಾ ಜಿಲ್ಲಾಡಳಿತ ಮಾತ್ರ ಈ ಸಮಸ್ಯೆಯ ಪರಿಹಾರಕ್ಕೆ ವಿವಾದಾತ್ಮಕ ಧೋರಣೆ ಅಳವಡಿಸಿಕೊಂಡಿದ್ದು, “ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಮತ್ತು ಭದ್ರತೆ” ನೀಡಲು ಫ್ಯಾನ್ ಗಳಿಗೆ ಸ್ಪ್ರಿಂಗ್ ಗಳನ್ನು ಅಳವಡಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಮಂಗಳವಾರ ಆತ್ಮಹತ್ಯೆಗೆ ಮಾಡಿಕೊಂಡ ವಿದ್ಯಾರ್ಥಿಯನ್ನು ಬಿಹಾರದ ಗಯಾ ಜಿಲ್ಲೆಯ ವಾಲ್ಮೀಕಿ ಜಂಗಿದ್ ಎಂದು ಗುರುತಿಸಲಾಗಿದೆ. ಜಂಟಿ ಪ್ರವೇಶ ಪರೀಕ್ಷೆಗೆ ವ್ಯಾಸಂಗ ಮಾಡುತ್ತಿದ್ದ ಆತ, ಕಳೆದ ಒಂದು ವರ್ಷದಿಂದ ಕೋಟಾದಲ್ಲಿ ನೆಲೆಸಿದ್ದ ಎಂದು India Today ವರದಿ ಮಾಡಿದೆ.
ಫ್ಯಾನ್ ಕುರಿತ ನಿರ್ಧಾರವನ್ನು ಪ್ರಕಟಿಸಿರುವ ಜಿಲ್ಲಾಧಿಕಾರಿ ಓಂ ಪ್ರಕಾಶ್ ಬುಂಕರ್, “ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಹಾಗೂ ಭದ್ರತೆ ಒದಗಿಸಲು ಮತ್ತು ಕೋಟಾ ನಗರದಲ್ಲಿ ತರಬೇತಿನಿರತರಾಗಿರುವ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳವಾಗುವುದನ್ನು ತಡೆಯಲು, ಶನಿವಾರದ ಸಭೆಯಲ್ಲಿ ಚರ್ಚಿಸಿದಂತೆ ಎಲ್ಲ ಕೋಣೆಗಳಲ್ಲಿನ ಫ್ಯಾನ್ ಗಳಲ್ಲಿ ಭದ್ರತಾ ಸ್ಪ್ರಿಂಗ್ ಅಳವಡಿಸುವಂತೆ ರಾಜ್ಯದ ಎಲ್ಲ ವಿದ್ಯಾರ್ಥಿ ನಿಲಯ/ಪಾವತಿ ಅತಿಥಿ ಗೃಹ ನಿರ್ವಾಹಕರಿಗೆ ನಿರ್ದೇಶಿಸಲಾಗಿದೆ” ಎಂದು ತಮ್ಮ ಆದೇಶದಲ್ಲಿ ಹೇಳಿದ್ದಾರೆ.