"ನಿಮ್ಮ ಬಟ್ಟೆ ಬಿಚ್ಚದಿದ್ದರೆ ಕೊಂದು ಬಿಡುತ್ತೇವೆ": ನಗ್ನ ಪೆರೇಡ್ ಮಾಡಿದ ಕುಕಿ ಮಹಿಳೆಯರಿಗೆ ಧಮಕಿ ಹಾಕಿದ್ದ ಮೈತಿ ಗುಂಪು

Update: 2023-07-20 06:20 GMT

Screengrab : Twitter

ಇಬ್ಬರು ಕುಕಿ ಮಹಿಳೆಯರನ್ನು​ ದೊಡ್ಡ ಮೈತಿ ಪುರುಷರ ಗುಂಪೊಂದು​ ಸಂಪೂರ್ಣ ಬೆತ್ತಲೆ​ಗೊಳಿಸಿ ಎಲ್ಲರೆದುರು ಮೆರವಣಿಗೆ ಮಾಡುತ್ತಿರುವ ವಿಡಿಯೋ ಮಣಿಪುರದಿಂದ ಹೊರಬಿದ್ದಿದೆ.​ ಆ ಪುರುಷರು ಎಲ್ಲರೆದುರೇ ಆ ಮಹಿಳೆಯರ ದೇಹದ ಜೊತೆ ಅತ್ಯಂತ ಅಸಭ್ಯವಾಗಿ ವರ್ತಿಸುವ ದೃಶ್ಯಗಳೂ ಆ ವಿಡಿಯೋದಲ್ಲಿವೆ. ​ಪುರುಷರು ​ಆಘಾತಗೊಂಡಿರುವ ಆ ಮಹಿಳೆಯರನ್ನು ಹೊಲಗಳಿಗೆ ಎಳೆದುಕೊಂಡು ಹೋಗುವಾಗ ಹಲ​ವು ಯುವಕರು ​ಅವರ ಜೊತೆ ಹೋಗೋದನ್ನು ಆ ವೀಡಿಯೊದಲ್ಲಿ ಕಾಣಬಹುದು.

ಮೇ 4 ರಂದು ಕಾಂಗ್‌ಪೊಕ್ಪಿ ಜಿಲ್ಲೆಯ ಬಿ ಫೈನೋಮ್ ಎಂಬ ಹಳ್ಳಿಯ ಬಳಿ ಮೈತಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ಭುಗಿಲೆದ್ದ ಒಂದು ದಿನದ ನಂತರ ​ಈ ಘೋರ ದಾಳಿ ನಡೆದಿದೆ ಎಂದು ​ಗುಂಪಿನಿಂದ ದಾಳಿಗೊಳಗಾದ ಪೈಕಿ ಒಬ್ಬ​ ಮಹಿಳೆ scroll.in ಮಾತಾಡಿಸಿದಾಗ ಹೇಳಿದ್ದಾರೆ.

ಹತ್ತಿರದ ಹಳ್ಳಿಯಲ್ಲಿ ಮೈತಿ ​ಗುಂಪೊಂದು "ಮನೆಗಳನ್ನು ಸುಡುತ್ತಿದೆ" ಎಂದು ​ಗೊತ್ತಾದಾಗ ಆಕೆಯ ಕುಟುಂಬ ಮತ್ತು ಇತರರು ​ಪಕ್ಕದ ಲೇನ್​ ಒಂದರ ಮೂಲಕ ತಪ್ಪಿಸಿಕೊಂಡರು, ಆದರೆ ​ಇವರು ಗುಂಪಿನ ಕೈಗೆ ಸಿಕ್ಕಿಬಿದ್ದರು ಎಂದು​ ಮಹಿಳೆ ಹೇಳಿ​ದ್ದಾರೆ. ಆಕೆಯ ನೆರೆ​ಯಾಕೆ ಮತ್ತು ಅವರ ಮಗನನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ​ಅಲ್ಲೇ ಕೊಂದಿದ್ದಾರೆ. ​ಆ ಬಳಿಕ ಗುಂಪು ಈ ಮಹಿಳೆಯರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿತು, "​ನಿಮ್ಮ ಬಟ್ಟೆಗಳನ್ನು ಕಿತ್ತೆಸೆಯಿರಿ" ಎಂದು​ ಗುಂಪಿನಲ್ಲಿದ್ದವರು ಹೇಳಿದರು.

"ನಾವು ವಿರೋಧಿಸಿದಾಗ, ​ "ನೀವು ನಿಮ್ಮ ಬಟ್ಟೆಗಳನ್ನು ತೆಗೆಯದಿದ್ದರೆ, ನಿಮ್ಮನ್ನು ನಾವು ಕೊಲ್ಲುತ್ತೇವೆ" ಎಂದು ನಲವತ್ತರ ಹರೆಯದ​ ಆ ಮಹಿಳೆಗೆ ಹೇಳಿ​ದ್ದಾರೆ.​ ​" ನನ್ನನ್ನು ರಕ್ಷಿಸಿಕೊಳ್ಳಲು​ ನನ್ನ ಮೈಮೇಲಿದ್ದ ಪ್ರತಿಯೊಂದು ಉಡುಪುಗಳನ್ನು​ ನಾನು ತೆಗೆದೆ. ​ಆಗ ​ನನ್ನ 21 ವರ್ಷದ ​ಪಕ್ಕದ ಮನೆ ಯುವತಿಗೆ ಏನಾಗುತ್ತಿದೆ ಎಂಬುದರ ಬಗ್ಗೆ ತನಗೆ ತಿಳಿದಿಲ್ಲ, ​ ಅವಳು ಸ್ವಲ್ಪ ದೂರದಲ್ಲಿದ್ದಳು​" ಎಂದು ​ಆಕೆ ಹೇಳಿ​ದ್ದಾರೆ.

ನಂತರ ಆಕೆಯನ್ನು ರಸ್ತೆಯ ಬಳಿಯಿರುವ ಗದ್ದೆಗೆ ಎಳೆದೊ​ಯ್ದಿದ್ದಾರೆ. ಅಲ್ಲಿ "ಮಲಗಲು" ​ಆ ಪುರುಷರು ​ಹೇಳಿದರು ಎಂದು ಮಹಿಳೆ ಆರೋಪಿಸಿದ್ದಾರೆ. "ಅವರು ನನಗೆ ಹೇಳಿದಂತೆ ನಾನು ಮಾಡಿದೆ​. ಮತ್ತೆ ಮೂವರು ಪುರುಷರು ನನ್ನನ್ನು ಸುತ್ತುವರೆದರು... ಅವರಲ್ಲಿ ಒಬ್ಬರು ಇನ್ನೊಬ್ಬರಿಗೆ, '​ಇವಳನ್ನು ಅತ್ಯಾಚಾರ ಮಾಡೋಣ' ಎಂದು ಹೇಳಿದರು, ಆದರೆ ಅಂತಿಮವಾಗಿ ಅವರು​ ಅತ್ಯಾಚಾರ ಮಾಡಲಿಲ್ಲ​" ​ ಎಂದು ಆ ಮಹಿಳೆ scroll.in ಗೆ ಹೇಳಿದ್ದಾರೆ.

​ತಾನು "ಅದೃಷ್ಟಶಾಲಿ" ಎಂದ​ ಆ ಮಹಿಳೆ ಅವರು ಅತ್ಯಾಚಾರ ಮಾಡುವ ಮಟ್ಟಿಗೆ ಹೋಗಲಿಲ್ಲ ​, "ಆದರೆ ಅವರು ನನ್ನ ಸ್ತನಗಳನ್ನು ಹಿಡಿದರು," ​ಎಂದು ಹೇಳಿ​ದ್ದಾರೆ. ಇನ್ನೊಬ್ಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆಮೇಲೆ ಗೊತ್ತಾಯಿತು.

​ಆ ಬಗ್ಗೆ ಬಂದ ದೂರಿನ ಆಧಾರದ ಮೇಲೆ, ಮೇ 18 ರಂದು ಕಾಂಗ್‌ಪೋಕ್ಪಿ ಜಿಲ್ಲೆಯ ಸೈಕುಲ್ ಪೊಲೀಸ್ ಠಾಣೆಯಲ್ಲಿ​ ಶೂನ್ಯ ​ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.​ ಶೂನ್ಯ ಎಫ್‌ಐಆರ್ ಯಾವುದೇ ಪೊಲೀಸ್ ಠಾಣೆಗೆ ದೂರು ಸ್ವೀಕರಿಸಲು ಮತ್ತು ದಾಖಲಿಸಲು ಮತ್ತು ನಂತರ ಅದನ್ನು ಸಂಬಂಧಪಟ್ಟ ಠಾಣೆಗೆ ರವಾನಿಸಲು ​ಅವಕಾಶ ನೀಡುತ್ತದೆ.

"800​ ರಿಂದ 1,000" ಸಂಖ್ಯೆಯ "ಅಪರಿಚಿತ ದುಷ್ಕರ್ಮಿಗಳ" ವಿರುದ್ಧ ಅತ್ಯಾಚಾರ ಮತ್ತು ಕೊಲೆಯ ಆರೋಪಗಳನ್ನು ಹೊರಿಸಲಾಗಿದೆ ಎಂದು ಸೈಕುಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಹಿಂಸಾಚಾರ ​ಪ್ರಾರಂಭವಾಗಿ ಒಂದು ದಿನದ ಬಳಿಕ ಅಂದರೆ ಮೇ 4ರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

“ಕೆಲವು ಅಪರಿಚಿತ ದುಷ್ಕರ್ಮಿಗಳ​ ಗುಂಪು ಎ ಕೆ ರೈಫಲ್ಸ್, ಎಸ್‌​ ಎಲ್‌​ ಆರ್‌​ ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರ​ಗಳು, INSAS ಮತ್ತು​ ಪಾಯಿಂಟ್ 303 ರೈಫಲ್ಸ್​ ಇತ್ಯಾದಿಗಳ ಜೊತೆ ಮಣಿಪುರದ ದ್ವೀಪದ ಉಪ-ವಿಭಾಗದ ಕಾಂಗ್‌ಪೋಕ್ಪಿ ಜಿಲ್ಲೆಯ ನಮ್ಮ ಗ್ರಾಮವನ್ನು ಬಲವಂತವಾಗಿ ಪ್ರವೇಶಿಸಿತು​ .​ ನಂತರ ಗುಂಪೊಂದು ಗ್ರಾಮದಲ್ಲಿನ ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡಿದೆ ಎಂದು ದೂರಿನಲ್ಲಿ ತಿಳಿ​ಸಲಾಗಿದೆ.

​ಆಗ ತಮ್ಮನ್ನು ರಕ್ಷಿಸಿಕೊಳ್ಳಲು "ಕಾಡಿನ ಕಡೆಗೆ" ಪಲಾಯನ ಮಾಡುತ್ತಿ​ದ್ದ ಐದು ಮಂದಿ ಈ ದಾಳಿ ಮಾಡಿದ ಗುಂಪಿನ ಕೈಗೆ ಸಿಕ್ಕಿ ಬಿದ್ದಿದ್ದಾರೆ.

​ಐವರಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಇದ್ದರು. ಅವರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರು: 56 ವರ್ಷದ ವ್ಯಕ್ತಿ, ​ಅವರ 19 ವರ್ಷದ ಮಗ ಮತ್ತು 21 ವರ್ಷದ ಮಗಳು. ಇಬ್ಬರು ಮಹಿಳೆಯರು, ಒಬ್ಬರು 42 ವರ್ಷ ಮತ್ತು ಇನ್ನೊಬ್ಬರು 52 ವರ್ಷ ​ - ಸಹ ​ಆ ಗುಂಪಿನ ಭಾಗವಾಗಿದ್ದರು.

ಅರಣ್ಯಕ್ಕೆ ಹೋಗುವ ದಾರಿಯಲ್ಲಿ, ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯ ತಂಡವು ಅವರನ್ನು "ಪಾರುಮಾಡಿತು" ಎಂದು ದೂರಿನಲ್ಲಿ ಸೇರಿಸಲಾಗಿದೆ. ​ಆದರೆ , ​ ಪೊಲೀಸ್ ಠಾಣೆಯಿಂದ ಎರಡು ಕಿಮೀ ದೂರದಲ್ಲಿರುವ ಟೌಬು ಬಳಿ ಹಿಂಸಾತ್ಮಕ ​ಗುಂಪು ಅವರನ್ನು​ತಡೆಯಿತು ಮತ್ತು ಪೊಲೀಸ್ ​ ಕಸ್ಟಡಿಯಿಂದ ಕಸಿದುಕೊಂಡಿತು" ಎಂದು ದೂರಿನಲ್ಲಿ ಆರೋಪಿಸಲಾಗಿದೆ.

​ಆ ಗುಂಪು ತಕ್ಷಣವೇ 56 ವರ್ಷದ ವ್ಯಕ್ತಿಯನ್ನು ಕೊಂದಿತು​. ನಂತರ "ಮೂವರೂ ಮಹಿಳೆಯರನ್ನು ​ ತಮ್ಮ ಬಟ್ಟೆಗಳನ್ನು ತೆಗೆಯುವಂತೆ ಒತ್ತಾಯಿಸಲಾಯಿತು ಮತ್ತು ಗುಂಪಿನ ಮುಂದೆ ವಿವಸ್ತ್ರಗೊಳಿಸಲಾಯಿತು".​ 21 ವರ್ಷದ ಮಹಿಳೆಯನ್ನು "​ಹಾಡ ಹಗಲೇ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು", ಇತರ ಇಬ್ಬರು ಮಹಿಳೆಯರು "ತಮಗೆ ತಿಳಿದಿರುವ ಪ್ರದೇಶದ ಕೆಲವು ಜನರ ಸಹಾಯದಿಂದ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು" ಎಂದು ದೂರಿನಲ್ಲಿ ಆರೋಪಿಸಲಾಗಿದೆ.

21 ವರ್ಷದ "ಕಿರಿಯ ಸಹೋದರ ತನ್ನ ಸಹೋದರಿಯ ​ಮಾನ ಮತ್ತು ಜೀವನವನ್ನು ರಕ್ಷಿಸಲು ಪ್ರಯತ್ನಿಸಿದ​. ಆದರೆ ಅವನನ್ನು ​ಗುಂಪು ಸ್ಥಳದಲ್ಲೇ ಕೊಂ​ದು ಹಾಕಿತು " ಎಂದು ​ದೂರಿನಲ್ಲಿದೆ. ​

ಅಲ್ಪಸಂಖ್ಯಾತರು​, ಆದಿವಾಸಿಗಳ ಮೇಲೆ ಇಂತಹ ಹತ್ಯಾಕಾಂಡ ಹಾಗು ಗುಂಪು ಹಿಂಸೆ ನಡೆಯುವಾಗ ದೇಶದ ಇತರೆಡೆ ಅನುಸರಿಸುವ ಪ್ಯಾಟರ್ನ್ ಅನ್ನೇ ಮಣಿಪುರದಲ್ಲೂ ಅನುಸರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕುಕಿ ಮಹಿಳೆಯರ ಮೇಲೆ ಈ ಘೋರ ದಾಳಿ ನಡೆಯುವ ಮೊದಲು ಮೈತಿ ಮಹಿಳೆಯರ ಮೇಲೆ ಕುಕಿ ಪುರುಷರು ಅತ್ಯಾಚಾರ ಮಾಡಿದ್ದಾರೆ ಎಂದು​ ಸುಳ್ಳು ಹರಡಲಾಗಿದೆ. ಇದರ ಮೂಲ ಎಡಿಸನ್ ​ಮೊಯಿರಾಂಗ್‌ಥೆಮ್​ ಎಂಬವನು ಎಂಬ ಆರೋಪ ಕೇಳಿ ಬಂದಿದೆ.

ಈ ಮಹಿಳೆಯರ ಮೇಲಿನ ದಾಳಿಯ ವಿಷಯ ಎರಡೂವರೆ ತಿಂಗಳ ಬಳಿಕ ಬೆಳಕಿಗೆ ಬಂದಿದೆ.

ಮಣಿಪುರದಲ್ಲಿ ಹಿಂಸೆಯನ್ನು ತಡೆಯುವಲ್ಲಿ ಅಲ್ಲಿನ ಬಿಜೆಪಿ ಸರಕಾರ ಮಾತ್ರವಲ್ಲ ದಿಲ್ಲಿಯಲ್ಲೂ ಇರುವ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News