ಕುನೋ ರಾಷ್ಟ್ರೀಯ ಉದ್ಯಾನವನ - ಒಂದು ವರ್ಷದ ಆವರಣ ವಾಸದ ಬಳಿಕ ಮತ್ತೆ ಕಾಡಿಗೆ ತೆರಳಲಿರುವ ಚೀತಾಗಳು

Update: 2024-08-24 17:45 GMT

PC : NDTV

ಹೊಸದಿಲ್ಲಿ: ಆರೋಗ್ಯ ತಪಾಸಣೆ ಹಾಗೂ ನಿಗಾವಣೆಗಾಗಿ ಸುಮಾರು ಒಂದು ವರ್ಷದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ ನಿರ್ಬಂಧಿತ ಆವರಣದಲ್ಲಿ ಇರಿಸಲ್ಪಟ್ಟಿದ್ದ ಆಫ್ರಿಕಾದಿಂದ ತರಿಸಲಾದ ಚೀತಾಗಳನ್ನು ಶೀಘ್ರದಲ್ಲೇ ಕಾಡಿನಲ್ಲಿ ಸ್ವಚ್ಛಂದವಾಗಿ ತಿರುಗಾಡಲು ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಮಧ್ಯಭಾಗದಿಂದ ಮುಂಗಾರು ಸರಿಯುತ್ತಿದ್ದಂತೆಯೇ, ಆಫ್ರಿಕನ್‌ ಚೀತಾಗಳನ್ನು ಹಾಗೂ ಅವುಗಳಿಗೆ ಭಾರತದಲ್ಲಿ ಜನಿಸಿದ ಮರಿಗಳನ್ನು ಹಂತಹಂತವಾಗಿ ಕಾಡಿಗೆ ಬಿಡಲು ಕೇಂದ ಸರಕಾರದ ಚೀತಾ ಯೋಜನೆಯ ಚಾಲನಾ ಸಮಿತಿ ಶುಕ್ರವಾರ ನಿರ್ಧರಿಸಿದೆ.

ಮುಂಗಾರು ಮಳೆ ಕೊನೆಗೊಂಡ ಕೂಡಲೇ ಮೊದಲ ಹಂತದಲ್ಲಿ ವಯಸ್ಕ ಚೀತಾಗಳನ್ನು ಕಾಡಿಗೆ ಬಿಡಲಾಗುವುದು. ಚೀತಾ ಮರಿಗಳು ಹಾಗೂ ಅವುಗಳ ತಾಯಂದಿರನ್ನು ಡಿಸೆಂಬರ್ ಆನಂತರ ಬಿಡುಗಡಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

13 ವಯಸ್ಕ ಹಾಗೂ 12 ಮರಿಗಳು ಸೇರಿದಂತೆ ಎಲ್ಲಾ 25 ಚೀತಾಗಳು ಆರೋಗ್ಯವಾಗಿವೆ. ಅವುಗಳಿಗೆ ರೋಗಗಳಿಂದ ರಕ್ಷಣೆ ನೀಡಲು ಲಸಿಕೆಗಳನ್ನು ನೀಡಲಾಗಿದೆ ಹಾಗೂ ಸೋಂಕನ್ನು ತಡೆಯಲು ಪ್ರೊಫಿಲ್ಯಾಕ್ಟಿಕ್ ಔಷಧಿಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂಟು ಚಿರತೆಗಳ ಮೊದಲ ತಂಡವನ್ನು 2022ರ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ತರಲಾಗಿತ್ತು. 12 ಚೀತಾಗಳ ಎರಡನೆ ಬ್ಯಾಚನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕದಿಂದ ತರಲಾಗಿತ್ತು.

ಚೀತಾಗಳನ್ನು ಕಳೆದ ವರ್ಷ ಕಾಡಿಗೆ ಬಿಡುಗಡೆಗೊಳಿಸಲಾಗಿತ್ತು. ಆದರೆ ಅವುಗಳಲ್ಲಿ ಮೂರು ‘ಸೆಪ್ಟಿಸೆಮಿಯಾ’ ಎಂಬ ಸೋಂಕಿನಿಂದ ಮೃತಪಟ್ಟ ಬಳಿಕ ಅವುಗಳನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ನಿರ್ಬಂಧಿತ ಆವರಣಕ್ಕೆ ಮರಳಿತರಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News