ಮೋದಿ ಸರಕಾರದಲ್ಲಿ ಮುಸ್ಲಿಮರ ಪ್ರಾತಿನಿಧ್ಯದ ಕೊರತೆ: ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ಎಂದ ಕೆ. ಸುಧಾಕರನ್

Update: 2024-06-11 09:20 GMT

ಕೆ. ಸುಧಾಕರನ್ | PC : PTI 

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್‌ಡಿಎ ಸರಕಾರದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯವಿಲ್ಲದ್ದನ್ನು ಟೀಕಿಸಿರುವ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ಕಣ್ಣೂರು ಸಂಸದ ಕೆ.ಸುಧಾಕರನ್ ಅವರು,ಇದು ಅತ್ಯಂತ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.

ಮೋದಿ 3.0 ಸರಕಾರದಲ್ಲಿ ದೇಶದ ಮುಸ್ಲಿಮ್ ಜನಸಂಖ್ಯೆಯನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ. ಬಿಜೆಪಿಯ ಸಂಸದರಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿಯಿಲ್ಲ. ಇದು ಅತ್ಯಂತ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಮಂಗಳವಾರ ಹೇಳಿಕೆಯೊಂದರಲ್ಲಿ ತಿಳಿಸಿರುವ ಸುಧಾಕರನ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರಾತಿನಿಧ್ಯ ಸಾಮಾನ್ಯ ವಿಷಯವಾಗಿದೆ ಎಂದಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಮೋದಿಯವರ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿರುವ ಸುಧಾಕರನ್,ಅವರು ದ್ವೇಷಭಾಷಣಗಳನ್ನು ಮಾಡುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂದು ದೇಶದಲ್ಲಿ ಪ್ರಬಲ ಪ್ರತಿಪಕ್ಷವಿದೆ ಎಂದಿರುವ ಅವರು,ಇಂಡಿಯಾ ಮೈತ್ರಿಕೂಟ ಮತ್ತು ಅದರ ನೇತೃತ್ವ ವಹಿಸಿರುವ ಕಾಂಗ್ರೆಸ್ ಎಲ್ಲ ಜನರನ್ನು ಒಟ್ಟುಗೂಡಿಸಿ ಮುನ್ನಡೆಯಲಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News